You are currently viewing ಅವಧೂತರ ಗುರು ಮತ್ತು ಗುರಿಯ ಅನ್ವೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಅವಧೂತರ ಗುರು ಮತ್ತು ಗುರಿಯ ಅನ್ವೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಭಾರತದ ಶ್ರೇಷ್ಠ ಆಧ್ಯಾತ್ಮ ಯೋಗಿಗಳಲ್ಲಿ ಒಬ್ಬರೆನಿಸಿರುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಜ್ಞಾನಸಾಗರದ ಅಂಶಗಳನ್ನು ಪದಗಳ ರೂಪದಲ್ಲಿ ಭಕ್ತ ಅನುಯಾಯಿಗಳೆದುರು ಪ್ರಸ್ತುತ ಪಡಿಸುತ್ತಿದ್ದೇವೆ. ಈ ಲೇಖನದಲ್ಲಿ ಅವಧೂತರು ತಾನು ಗುರುಗಳು ಎಂದು ಸ್ವೀಕರಿಸಿರುವ ಮಹಾತ್ಮರ ಬಗ್ಗೆ ವ್ಯಕ್ತಪಡಿಸಿರುವ ಅನುಭಾವ ನುಡಿಗಳ ಸಂಗ್ರಹದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ಮಹಾತ್ಮಾ ಗಾಂಧೀಜಿ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ರಾಷ್ಟ್ರಪಿತನ ತತ್ವಾದರ್ಶಗಳನ್ನು ಪಾಲಿಸಿದಾಗ ದೇಶ ಸುಭೀಕ್ಷವಾಗುತ್ತದೆ. ಗಾಂಧಿ ಅಹಿಂಸೆ ಮತ್ತು ಸತ್ಯ ನಿಷ್ಠೆ ಎಂಬ ಎರಡು ನೀತಿ ಶಾಸ್ತ್ರಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ. ತನ್ನ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಇಂಚಿಂಚೂ ಕೂಡಾ ತನ್ನ ಆತ್ಮಕಥನದಲ್ಲಿ ಬರೆದಿರುವ ಏಕೈಕ ಮಹಾನ್ ವ್ಯಕ್ತಿ ಅಂದರೆ ಅದು ಮಹಾತ್ಮಾ ಗಾಂಧಿಜಿ. ಇದು ಗಾಂಧಿಜಿ ಅವರ ಸತ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. ಅಹಿಂಸೆಯೆಂದರೆ ಪ್ರತಿರೋಧಿಸಲು ಶಕ್ತಿಯಿದ್ದು ಪ್ರತಿರೋಧಿಸದೇ ಹಿಂಸಿಸದೇ ಇರುವುದಾಗಿದೆ. ಸಾರ್ವಜನಿಕರಿಗೆ ಅಹಿಂಸೆ ಮತ್ತು ಧಾರ್ಮಿಕ ನೀತಿಗಳನ್ನು ಹೇಳಿಕೊಡುವ ಮೊದಲು ಗಾಂಧಿಜಿ ತನ್ನ ಮನೆಯವರನ್ನು ಅಹಿಂಸೆಯ ದಾರಿಯಲ್ಲಿ ನಡೆಸಿದ್ದರು. ಅದೇ ರೀತಿ ಬಹಳ ದೈವ ಭಕ್ತರಾಗಿದ್ದ ಗಾಂಧಿಜಿ ಪ್ರತಿ ದಿನ ಮೂರು ಹೊತ್ತು ಪ್ರಾರ್ಥನೆ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಎಲ್ಲಾ ಧರ್ಮಗಳ ಜನರನ್ನೂ ಎಲ್ಲಾ ಸಮುದಾಯದ ಜನರನ್ನೂ ಒಟ್ಟು ಸೇರಿಸಿ ಅವರವರ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಎಲ್ಲರನ್ನೂ ಒಟ್ಟಾಗಿಸುವ ಮಹತ್ಕಾರ್ಯವನ್ನು ದಿನಂಪ್ರತೀ ಮಾಡುತ್ತಿದ್ದರು. ಗಾಂಧಿಜಿ ಕಾಲೋನಿಗಳಿಗೆ ತೆರಳಿ ಬರೀ ಸಮಾನತೆಯ ಬಗ್ಗೆ ಮಾತನಾಡದೇ ಅಲ್ಲಿನ ಜನರ ಕಷ್ಟ ಸುಖಗಳನ್ನು ಅರಿತು ಅಲ್ಲಿನ ಸ್ವಚ್ಚತಾ ಕಾರ್ಯಗಳನ್ನು ಸ್ವತಃ ತಾವೇ ನಡೆಸುತ್ತಿದ್ದರು. ಗಾಂಧಿಜಿ ಹಿಂಸೆಯನ್ನು ವಿರೋಧಿಸುವ ಬದಲು ಹಿಂಸೆಯ ದಾರಿ ಮತ್ತು ಆಲೋಚನೆಯನ್ನೇ ಬದಲಾವಣೆ ಮಾಡುವ ಮೂಲಕ ಅಹಿಂಸೆಯ ಪಾಠ ಹೇಳುತ್ತಿದ್ದರು ಎನ್ನುವ ಅವಧೂತರು ಸದಾ ಗಾಂಧೀ ಮಾರ್ಗದಲ್ಲಿ ನಡೆಯುವ ಮೂಲಕ ಅವರ ತತ್ವಾದರ್ಶಗಳ ಪ್ರತಿರೂಪವೆನಿಸಿಕೊಂಡಿದ್ದಾರೆ

ಶ್ರೀ ನಿತ್ಯಾನಂದ ಭಗವಾನರನ್ನು ಅವಧೂತರು ತನ್ನ ಜೀವನವನ್ನು ಪ್ರಭಾವಿಸಿದ ಮತ್ತೊಬ್ಬ ಮಹಾಸಂತನೆಂದು ಕರೆದಿದ್ದಾರೆ. ನಿತ್ಯಾನಂದ ಭಗವಾನರು ಆಧ್ಯಾತ್ಮಿಕ ಜ್ಞಾನ ಭಂಡಾರವೇ ಆಗಿದ್ದರೂ ಸರಳ ಜೀವನ ಶೈಲಿಯಿಂದ ದೇಶದ ನಾನಾ ಕಡೆಗಳಲ್ಲಿ ಭಕ್ತ ಅನುಯಾಯಿಗಳನ್ನು ಸಂಪಾದಿಸಿದ ಮಹಾ ತಪಸ್ವಿ. ಮೋಕ್ಷವನ್ನು ಉಪದೇಶ ಮಾಡಿರುವವರಲ್ಲಿ ಆದಿಗುರು ದತ್ತಾತ್ರೇಯರೂ ಒಬ್ಬರು. ದತ್ತ ಹಲವಾರು ಅವತಾರಗಳ ಮೂಲಕ ಕಲಿಯುಗಕ್ಕೆ ಉಪದೇಶ ನೀಡಿದ್ದಾನೆ. ಭಗವಾನ್ ನಿತ್ಯಾನಂದರು ಹಲವಾರು ಪವಾಡಗಳನ್ನಲ್ಲದೇ ಪರಿವರ್ತನೆಗಳನ್ನು ಕೂಡಾ ಮಾಡಿದ್ದಾರೆ. ಆಧ್ಯಾತ್ಮಿಕ ಕ್ರಾಂತಿಯ ಜೊತೆಗೆ ಜನರ ಸುಧಾರಣೆ ಕೂಡಾ ಭಗವಾನ್ ನಿತ್ಯಾನಂದರಿಂದ ನಡೆದಿದೆ. ನಿತ್ಯಾನಂದರ ನಿಜವಾದ ಆರಾಧನೆ ಅಂದರೆ ಅವರ ಪರಿಕಲ್ಪನೆಯನ್ನು ಜಗತ್ತಿಗೆ ಸಾರುವುದು ಎನ್ನುವುದು ಅವಧೂತರು ಆಧ್ಯಾತ್ಮ ಜ್ಞಾನದಿಂದ ಕಂಡುಕೊಂಡ ಸತ್ಯ.

ಪುತ್ತೂರು ಅಜ್ಜನ ನಿಕಟ ಬಾಂಧವ್ಯದಿಂದ ಆಧ್ಯಾತ್ಮದ ಪಾರಮಾರ್ಥ್ಯಯವನ್ನು ಕಂಡುಕೊಂಡ ಅವಧೂತರ ಕಣ್ಣಿನಲ್ಲಿ ಪುತ್ತೂರು ಅಜ್ಜ ಸರಳ ಸಾಂಸಾರಿಕ ಜೀವನದಲ್ಲೂ ಹಿಮಾಲಯದಂತಹ ಸಾಧನೆಯನ್ನು ಮಾಡಿದ ಮಹಾ ತಪಸ್ವಿಯಾಗಿದ್ದರು. ಪುತ್ತೂರು ಅಜ್ಜ ಅಹಿಂಸಾ ಸಿದ್ಧಾಂತವನ್ನು ಆಚರಣೆ ಮಾಡಿದವರು. ಸತ್ಯ ಮತ್ತು ಅಹಿಂಸೆಯನ್ನು ತನ್ನ ಜೀವನದ ಆದರ್ಶವೆಂದು ಪರಿಗಣಿಸಿ ಬದುಕಿದವರು ಪುತ್ತೂರು ಅಜ್ಜ. ಜಾತಿ, ಮತ ಮತ್ತು ಧರ್ಮವನ್ನು ಮೀರಿದ ಮಾನವೀಯತೆಯನ್ನು ಒಪ್ಪಿ ಬದುಕಿ ಜೀವನ ಪರ್ಯಂತ ಆ ಸಿದ್ಧಾಂತವನ್ನು ಆಚರಣೆ ಮಾಡಿದವರು ಪುತ್ತೂರು ಅಜ್ಜ. ಒಂದು ಜಾತಿ, ಒಂದು ಮತ, ಒಂದೇ ಧರ್ಮ ಅದು ಮನುಷ್ಯ ಧರ್ಮ ಎನ್ನುವ ಸಾರವನ್ನು ಅರಿತು ಬದುಕಿದವರು ಪುತ್ತೂರು ಅಜ್ಜ. ಅಜ್ಜನ ಆವಿಷ್ಕಾರ ಮುಖಗಳ ಪರಿಚಯ ಮಾಡುವುದಾದರೆ, ಅಜ್ಜ ಒಬ್ಬ ಮಹಾ ತಪಸ್ವಿಯೂ ಹೌದು, ಸರಳ ಜೀವಿಯೂ ಹೌದು. ಹಳ್ಳಿಯಲ್ಲಿ ಇದ್ದುಕೊಂಡು ಹಿಮಾಲಯದಂತಹ ಸಾಧನೆ ಮಾಡಿದವರು ಪುತ್ತೂರು ಅಜ್ಜ. ಸಂಸಾರದಲ್ಲೇ ಇದ್ದುಕೊಂಡು ಸಂಸಾರವನ್ನು ತಿರಸ್ಕಾರ ಮಾಡದೇ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಾ, ಒಂದು ಕಾಲಘಟ್ಟದ ನಂತರ ಸಂಸಾರದ ಭೋಗಗಳನ್ನು ತ್ಯಜಿಸಿ ಸಾಧನೆಗೈದು ಆಧ್ಯಾತ್ಮ ಯೋಗಿಯಾದವರು ಪೂತ್ತೂರಜ್ಜ. ಆಧ್ಯಾತ್ಮಕ್ಕೆ ಖಾವಿ ಬಟ್ಟೆಯೇ ಬೇಕಾಗಿಲ್ಲ, ಉದ್ದೇಶ ಗಟ್ಟಿಯಿದ್ದರೆ ಸಾಕು ಎನ್ನುವುದನ್ನು ಪುತ್ತೂರು ಅಜ್ಜ ನಿರೂಪಿಸಿದ್ದಾರೆ. ಅಜ್ಜನ ಜೀವನ ಶೈಲಿಯನ್ನು ಗಮನಿಸಿದರೆ ಕೃಷಿಕನಾಗಿ ಭೂಮಿ ತಾಯಿಯ ಸೇವೆಯನ್ನು ಮಾಡಿದ್ದಾರೆ. ಪುತ್ತೂರು ಅಜ್ಜ ತುಂಬಾ ಓದಿದವರೇನೂ ಆಗಿರಲಿಲ್ಲ ಆದರೆ ಸಾಂಸಾರಿಕ ಭಾಧ್ಯತೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜೀವನದ ಕೊನೆಯ ಘಟ್ಟದವರೆಗೂ ಸತ್ಯ ನಿಷ್ಠರಾಗಿ ಬದುಕಿದ ಮಹಾ ವ್ಯಕ್ತಿತ್ವ ಪುತೂರು ಅಜ್ಜನದು. ರಾಮಚಂದ್ರ ಎನ್ನುವ ಜೀವಾತ್ಮ ತನ್ನ ಸಾಧನೆಯ ಬೆಳವಣಿಗೆಯಿಂದ ಪರಮಾತ್ಮ ಸ್ಥಿತಿಯನ್ನು ಮುಟ್ಟಿ ತನ್ನ ಅಸ್ತಿತ್ವವನ್ನು ಕಂಡುಕೊಂಡು ನಿರ್ಗುಣ ಸ್ಥಿತಿಗೆ ಹೋದ ದೊಡ್ಡ ಸಾಧನಾ ಜೀವ ಪುತ್ತೂರು ಅಜ್ಜ. ಮನುಷ್ಯ ಜನ್ಮದ ಶ್ರೇಷ್ಠ ಸ್ಥಿತಿಯನ್ನು ಅಜ್ಜ ತಲುಪಿದ್ದರು. ಗಾಂಧೀಜಿಯ ಮತ್ತೊಂದು ಅವತಾರದಂತೆ ಬದುಕಿದವರು ಪುತ್ತೂರು ಅಜ್ಜ. ನಾಮಜಪ, ನಿಷ್ಕಾಮ ಕರ್ಮ ಮತ್ತು ತಪಸ್ಸು ಅಜ್ಜನಲ್ಲಿ ಪ್ರತಿಫಲಿಸುತ್ತಿತ್ತು. ಅಜ್ಜ ಓಂಕಾರ ಉಪಾಸನೆಯನ್ನು ಮಾಡುತ್ತಿದ್ದರು. ಅಜ್ಜ ಅಹಿಂಸೆ ಮತ್ತು ಪ್ರಾರ್ಥನೆಯ ಅವತಾರ ಎಂದೆನಿಸಿಕೊಂಡಿದ್ದಾರೆ ಎನ್ನುತ್ತಾರೆ ಅವಧೂತ ಶ್ರೀ ವಿನಯ್ ಗುರೂಜಿ ಅವರು.

ವೆಂಕಟಾಚಲ ಅವಧೂತರನ್ನು ತನ್ನ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದು ಸ್ವೀಕರಿಸಿರುವ ಅವಧೂತರಿಂದ ತಾನು ಸ್ವೀಕರಿಸಿದ ಅಂಶಗಳನ್ನು ಜಗತ್ತಿನೆದರು ಹಂಚಿಕೊಂಡಿದ್ದಾರೆ. ವೆಂಕಟಾಚಲ ಅವಧೂತರ ಬಗ್ಗೆ ಬಾಲ್ಯದಿಂದಲೂ ಕೇಳಿಕೊಂಡು ಬೆಳೆದದ್ದರಿಂದ ಅವರ ಬಗೆಗಿನ ಪರಿಚಯ ತಕ್ಕ ಮಟ್ಟಿಗೇ ಇತ್ತು. ಆದರೆ ಒಬ್ಬ ಸನ್ಯಾಸಿ ಇಷ್ಟೊಂದು ಸರಳ ಜೀವನ ನಡೆಸಲು ಸಾಧ್ಯವೇ ಎನ್ನುವ ಪ್ರಶ್ನಾರ್ಥಕ ಭಾವನೆಯನ್ನು ಮೂಡಿಸಿದ ಮಹಾಸಂತ ವೆಂಕಟಾಚಲ ಅವಧೂತರು. ಅವಧೂತ ಸ್ಥಿತಿಯ ಪರಿಚಯ ಮಾಡಿಸಿದ ಮಹಾ ಜ್ಞಾನಿಯೂ ವೆಂಕಟಾಚಲ ಅವಧೂತರೇ ಆಗಿದ್ದಾರೆ. ಅವಧೂತರೊಂದಿಗೆ ಬೆರೆಯುತ್ತಾ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಆಧ್ಯಾತ್ಮ ಸ್ಥಿತಿಯನ್ನು ಮುಂದುವರೆಸಿದ್ದರಿಂದ ತನಗೆ ಅವಧೂತ ಸ್ಥಿತಿ ಒಲಿದಿದೆ ಎನ್ನುವುದು ಅವಧೂತರ ಭಾವ.

ಪರಮಪೂಜ್ಯ ಅವಧೂತರನ್ನು ಅನೇಕ ಪ್ರೇರಣಾಶಕ್ತಿಗಳು ಪ್ರಭಾವಿಸಿದ್ದಾರೆ. ಅವಧೂತರು ಮಹಾತ್ಮಾ ಗಾಂಧೀ, ನಿತ್ಯಾನಂದ ಭಗವಾನರು, ಪುತ್ತೂರು ಅಜ್ಜ ಮತ್ತು ವೆಂಕಟಾಚಲ ಅವಧೂತರನ್ನು ಆಧ್ಯಾತ್ಮದ ಗುರುವಾಗಿ ಸ್ವೀಕರಿಸಿ ಅವರೆಲ್ಲರ ಜೀವನದ ಪರಿಪೂರ್ಣ ಅಂಶವಾಗಿ ಇಂದು ಸಮಾಜಕ್ಕೆ ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವುದು ಅಕ್ಷರಶಃ ಸತ್ಯ.