You are currently viewing ಆಧ್ಯಾತ್ಮ ಮತ್ತು ವಿಜ್ಞಾನದ ಸಮೀಕರಣ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಆಧ್ಯಾತ್ಮ ಮತ್ತು ವಿಜ್ಞಾನದ ಸಮೀಕರಣ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರೊಂದಿಗೆ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟಾಲಜಿ ಸೈನ್ಸಸ್ ಮತ್ತು ಆರ್ಗನ್ ಟ್ರಾನ್ಸ್ ಪ್ಲಾಂಟ್, ಬೆಂಗಳೂರು ಇದರ ನಿರ್ದೇಶಕರು ಮತ್ತು ದೇಶದ ಖ್ಯಾತ ವೈದ್ಯರಲ್ಲೊಬ್ಬರಾದ ಡಾ. ನಾಗೇಶ್ ಗೌಡ ಅವರು ನಡೆಸಿದ ಆಧ್ಯಾತ್ಮ ಮತ್ತು ವಿಜ್ಞಾನದ ನಡುವಿನ ಸಂಬಂಧದ ಕುರಿತ ವಿಶೇಷ ಸಂದರ್ಶನವೇ ಗುರುಬ್ರಹ್ಮ. ಈ ಸಂದರ್ಶನದಲ್ಲಿ ಅವಧೂತರು ಹೇಳಿರುವ ಆಧ್ಯಾತ್ಮ ಮತ್ತು ವಿಜ್ಞಾನದ ಸಮೀಕರಣ ಇಲ್ಲಿದೆ.

 ಆಧ್ಯಾತ್ಮ ಮತ್ತು ವಿಜ್ಞಾನದ ನಡುವಿನ ದ್ವಂದದ ದೃಷಿಕೋನದಲ್ಲಿ ವಿವೇಕದ ಮಟ್ಟಿಗೆ ಇರುವ ಜ್ಞಾನ ವಿಜ್ಞಾನ. ಅದಕ್ಕೆ ವಿವೇಕದ ಚೌಕಟ್ಟಿದೆ. ವಿವೇಕದ ಮಟ್ಟವನ್ನು ದಾಟಿದ ಚೈತನ್ಯವನ್ನು ಆಧ್ಯಾತ್ಮ ಎನ್ನಲಾಗುತ್ತದೆ. ವಿಜ್ಞಾನದಲ್ಲಿ ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಜ್ಞಾನಗಳೆಂಬ ಮೂರು ವಿಧಗಳಿವೆ. ಆಧ್ಯಾತ್ಮದ ಪ್ರಕಾರ ಆದ್ಯ ಎಂದರೆ ಆರಂಭ ಎಂದರ್ಥ. ಇದನ್ನೇ ಆದಿ ಶಕ್ತಿ ಎನ್ನಲಾಗುತ್ತದೆ. ದೇಹದಲ್ಲಿ ಹೃದಯವು ಜೀವದ ಮೂಲವಾಗಿದೆ. ನಾರಾಯಣನು ಹೃದಯದಲ್ಲಿ ನೆಲೆಸಿದ್ದಾನೆ. ಆಧುನಿಕ ವಿಜ್ಞಾನದಲ್ಲಿ ವಿಧಿಯನ್ನು ಒಪ್ಪಲಾಗುತ್ತಿಲ್ಲ. ಮಾನವ ವಿಜ್ಞಾನದಿಂದ ಸರ್ವವನ್ನೂ ಸೃಷ್ಟಿಸಿದರೂ, ಮೂಲವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ನನ್ನಿಂದ ಆದ ವಾದವು ನಾಸ್ತಿಕ ವಾದ ಎನಿಸಿಕೊಳ್ಳುತ್ತದೆ. ಆಧ್ಯಾತ್ಮದ ಅಪಾರವಾದ ನಂಬಿಕೆಯಿಂದ ಮಾಡುವ ವಾದವು ಆಸ್ತಿಕ ವಾದ ಎನಿಸಿಕೊಳ್ಳುತ್ತದೆ. ವೈಜ್ಞಾನಿಕ ಅನ್ವೇಷಣೆಗಳ ಆಚೆಗೆ ಮಾನವ ಶರೀರವನ್ನು ವೀರ್ಯದ ರೂಪದಲ್ಲಿ ಸಮೀಕರಿಸಿರುವ ಭಗವಂತನ ಶಕ್ತಿಯನ್ನು ಊಹಿಸಲು ಅಸಾಧ್ಯ. ಕಣ್ಣಿಗೆ ಕಾಣುವ ಭೌತಿಕ ಜ್ಞಾನವು ವಿಜ್ಞಾನದ ಮೂಲವಾಗಿದೆ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಭಗವಂತನಿಂದ ನಿರ್ಮಿಸಲ್ಪಟ್ಟ ಅನಂತದಲ್ಲಿ ಬದುಕುತ್ತಿದ್ದೇವೆ. ಈ ಅನಂತದಲ್ಲಿ ಕಾಣುವ ಬೆಳಕೇ ಆದ್ಯಾ ಶಕ್ತಿ ಅಥವಾ ಆಧ್ಯಾತ್ಮವಾಗಿದೆ. ವಿಜ್ಞಾನದಲ್ಲಿ ಸೂರ್ಯನ ಬಗೆಗಿನ ವೈಜ್ಞಾನಿಕ ವಿಶ್ಲೇಷಣೆಗಳಿವೆ ಆದರೆ ಅದಕ್ಕೆ ಸೂರ್ಯನ ಹತ್ತಿರ ತಲುಪಲು ಸಾಧ್ಯವಾಗಿಲ್ಲ. ಆಧ್ಯಾತ್ಮದ ನೆಲೆಯಿರುವ ಶಾಸ್ತ್ರಗಳಲ್ಲಿ ಸೂರ್ಯನ ಸೃಷ್ಠಿಯ ಸಂಗತಿಗಳ ವಿಶ್ಲೇಷಣೆಯೂ ಇದೆ. ಪವಾಡಗಳು ನಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ, ನಮ್ಮ ಜ್ಞಾನದ ನಿಲುವಿಗೆ ಸಿಗದ ಘಟನೆಗಳು ನಡೆದಾಗ ಅದನ್ನು ಪವಾಡ ಎಂದು ಕರೆಯಲಾಗುತ್ತದೆ. ಪವಾಡವು ಜ್ಞಾನದ ಮಟ್ಟದ ಆಧಾರದಲ್ಲಿ ಅವಲಂಬಿತವಾಗಿದೆ. ನಮ್ಮ ಪೂರ್ವಜರಾದ ಋಷಿಗಳು ಇಂತಹಾ ಜ್ಞಾನವನ್ನು ಒಲಿಸಿಕೊಂಡಿದ್ದರು ಆದರೆ ಜನರು ಇದನ್ನು ಪವಾಡ ಎಂದು ಕರೆದಿದ್ದಾರೆ. ಇದಕ್ಕೆ ಕಾರಣ ಜನರಿಗೆ ಆ ಜ್ಞಾನದ ಅರಿವಿಲ್ಲದೇ ಇರುವುದೇ ಆಗಿದೆ. ವಿಜ್ಞಾನವು ವಾಸ್ತವವನ್ನು ಅವಲಂಬಿಸಿದೆ. ವಿದ್ವತ್ತನ್ನು ಸದ್ವಿನಿಯೋಗ ಮಾಡದ ವಿದ್ವಾಂಸರು ವಿಧ್ವಂಸಕ್ಕೆ ಕಾರಣರಾಗುತ್ತಾರೆ. ಉಗ್ರಗಾಮಿಗಳು ಇದಕ್ಕೆ ಸಾಕ್ಷಿ. ಪ್ರಾಣದ ಪರಿಧಿಯಲ್ಲಿ ತಿಳಿದಿರುವ ಜ್ಞಾನವು ಭೌತಿಕ ಜ್ಞಾನವಾದರೆ, ಪ್ರಾಣವನ್ನೇ ಹಿಡಿದಿಟ್ಟ ಜ್ಞಾನವು ಆಧ್ಯಾತ್ಮ ಜ್ಞಾನವಾಗುತ್ತದೆ. ಕಣಾದ ಎನ್ನುವ ಋಷಿಯಿಂದ ಅಣು ವಿಜ್ಞಾನದ ಜ್ಞಾನ ಜಗತ್ತಿಗೆ ತಿಳಿಯುತ್ತದೆ. ಹಿಂದೆ ಜಗತ್ತು ತನ್ನದೇ ಭಾಗ ಎನ್ನುವ ಪರಿಕಲ್ಪನೆ ಋಷಿ ಮುನಿಗಳಲ್ಲಿತ್ತು. ಹಿಂದಿನ ಸಂತತಿಯವರ ಸಾಧನೆಯು ಆಧ್ಯಾತ್ಮದ ಕಾರಣದಿಂದಾಗಿದೆ. ಆದರೆ ಪ್ರಸ್ತುತ ಹಣ ಸಂಪಾದನೆಯೇ ಸಾಧನೆಯ ಉದ್ದೇಶ ಎನಿಸಿಕೊಳ್ಳುತ್ತಿದೆ. ಮೆಕ್ಯಾನಿಕ್ ರೋಬೋಟ್ ರೀತಿಯಲ್ಲಿ ಬದುಕಲು ಇಚ್ಛಿಸುವವರಿಗೆ ಮೆಕಾಲೆ ಪದ್ದತಿಯು ಅನ್ವಯವಾಗುತ್ತದೆ. ಭಾರತ ದೇಶಕ್ಕೆ ಬೆಲೆ ಕೊಟ್ಟಿರುವುದು ಭಾವನೆ. ಸನಾತನ ಧರ್ಮವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ.

ಮೆಕಾಲೆ ಶಿಕ್ಷಣ ಪದ್ದತಿಯು ಯಾಂತ್ರಿಕ ಜೀವನ ಶೈಲಿಯನ್ನು ಬೋಧಿಸುತ್ತದೆ. ಮೆಕಾಲೆ ಮನಸ್ಥಿತಿಯ ವೈದ್ಯನಿಗೆ ಹಣ ಸಂಪಾದನೆಯೊಂದೇ ಮುಖ್ಯ ಧ್ಯೇಯವಾಗಿರುತ್ತದೆ. ಸಂಸ್ಕಾರದ ಹಿನ್ನಲೆಯಿರುವ ವೈದ್ಯರಿಗೆ ಒಂದು ಜೀವವನ್ನು ಉಳಿಸುವುದು ಮುಖ್ಯವಾಗುತ್ತದೆ. ಜನರ ಹೃದಯದಲ್ಲಿ ದೇವರ ಸ್ಥಾನ ಪಡೆದಿರುವ ಅನೇಕ ವೈದ್ಯರುಗಳು ಸಂಸ್ಕಾರದ ಮಾರ್ಗವನ್ನು ಪಾಲಿಸುತ್ತಾರೆ. ಸಾಧನೆ ಮತ್ತು ಪೂರ್ಣತೆಯ ನಡುವಿನ ವ್ಯತ್ಯಾಸವನ್ನು ನೋಡುವುದಾದರೆ. ಜ್ಞಾನರಹಿತವಾದ ಕಾರ್ಯವು ಸಾಧನೆಯಾದರೆ, ಜ್ಞಾನಪೂರ್ಣರಾಗಿ ಮಾಡುವ ಕಾರ್ಯವು ಪೂರ್ಣತೆ ಎನಿಸಿಕೊಳ್ಳುತ್ತದೆ. ಮನುಷ್ಯ ಪೌರ್ಣಮಿಯ ಚಂದ್ರನಂತಿದ್ದರೆ ಚಂದ. ಆ ಪೂರ್ಣತೆ ಒಲಿಯುವುದು ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಿಂದ. ಇಲ್ಲಿ ಆದರ್ಶ ಅತೀ ಅಗತ್ಯ. ಆಸೆಯು ಆದರ್ಶದಾಯಕವಗಿದ್ದರೆ ಅದು ದೈವತ್ವದ ಸಂಕೇತ, ಅದೇ ಆಸೆಯು ಆದರ್ಶದ ವಿರುದ್ಧವಾಗಿದ್ದರೆ ರಾಕ್ಷಸತ್ವವನ್ನು ಪಡೆಯುತ್ತದೆ. ಎಷ್ಟೇ ದೊಡ್ಡ ವೈದ್ಯನಾದರೂ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಭಗವಂತನ ಸ್ಮರಣೆಯುಂಟಾಗುತ್ತದೆ. ಪರಮೇಶ್ವರನ ಮುಂದೆ ತಾನು ನಶ್ವರ ಎಂದು ಅರಿತವನು ಆತ್ಮ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ನಂಬಿಕೆಯೇ ಆಧ್ಯಾತ್ಮದ ಆದಿಯಾಗಿದೆ. ಮನಸ್ಸೇ ಸರ್ವ ಚಮತ್ಕಾರದ ಮೂಲವಾಗಿದೆ. ಖಾಯಿಲೆಯ ಮೂಲ ಖಯಾಲಿ. ಮನಸ್ಥಿತಿ ಸರಿಯಿಲ್ಲದಿದ್ದಾಗ ಆಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಿಲ್ಲ. ಮನಸ್ಸಿನ ವೇಗ ಹೆಚ್ಚಿದಾಗ ನಮ್ಮ ನಡವಳಿಕೆಯಲ್ಲೂ ವ್ಯತ್ಯಯವನ್ನು ಕಾಣಬಹುದು. ಚಿತ್ರಕಾರರು ಆಧ್ಯಾತ್ಮ ಭಾವವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಒಬ್ಬ ವ್ಯಕ್ತಿಯ ಸಾಧನೆಗೆ ಪ್ರಚಾರದ ಅಗತ್ಯವಿರುವುದಿಲ್ಲ. ಪ್ರಕೃತಿಯೂ ಕಾಲಜ್ಞಾನಕ್ಕೆ ತೆರೆದುಕೊಂಡಿದೆ. ಅಶ್ವಿನೀ ದೇವತೆಗಳ ಪ್ರತಿರೂಪವಾದ ಚರಕ-ಶುಶ್ರುತರು ತನ್ನ ಗ್ರಂಥಗಳಲ್ಲಿ ಮೊದಲು ಖಾಯಿಲೆಗೆ ಬಾಧಿತವಾಗುವುದು ಮನಸ್ಸು ಎನ್ನುವುದನ್ನು ಉಲ್ಲೇಖಿಸುತ್ತಾನೆ. ಖಾಯಿಲೆಯಿದ್ದಾಗ ಮನಸ್ಸನ್ನು ಏಕಾಂತದಲ್ಲಿರಿಸಿ ಧನಾತ್ಮಕ ವಾತಾವರಣವನ್ನು ನಿರ್ಮಿಸಬೇಕು. ಮನಸ್ಸನ್ನು ಸಮಸ್ಥಿತಿಗೆ ತರುವುದೇ ಮೊದಲ ಚಿಕಿತ್ಸೆ. ದೇವರ ನಾಮ ಜಪಿಸುವುದರಿಂದಲೂ ಆಧ್ಯಾತ್ಮವಾಗಿ ಚಮತ್ಕಾರಗಳನ್ನು ಅನುಭವಿಸಬಹುದು. ಜಗತ್ತಿನಲ್ಲಿರುವ ವಾಯುವು ಜೀವದಲ್ಲಿರುವ ಅನಂತವನ್ನು ಸೇರಿದಾಗ ಉಸಿರಾಟ ಕ್ರಿಯೆ ನಡೆಯುತ್ತದೆ. ಪ್ರೀತಿ ಎನ್ನುವುದು ಜಗತ್ತಿನ ದೊಡ್ಡ ಔಷಧಿಯಾಗಿದೆ. ಎಷ್ಟೇ ಹಠ ಹಿಡಿದು ಅಳುವ ಮಗುವಾದರು ತಾಯಿಯ ಜೋಗುಳದ ಬಡಿತಕ್ಕೆ ಸಮಾಧಾನಗೊಳ್ಳುತ್ತದೆ. ತಾಯಿಯ ತೊಡೆಯಲ್ಲೂ ಇಂತಹುದೇ ಅದ್ಭುತವಿದೆ. ತಾಯಿಯ ಬಳಿ ಇರುವ ಸಹಜವಾದ ಪ್ರೀತಿಯು ಭಾರತದ ಸನಾತನ ಗುಣದ ಪ್ರತೀಕವಾಗಿದೆ. ಒಬ್ಬ ವ್ಯಕ್ತಿಯ ತಲೆಯಲ್ಲಿ ಭಾವನೆಗಿಂತ ಹೆಚ್ಚು ಹಣವೇ ಮೇಲು ಎನಿಸಿದಾಗ ಆತ ಎಂತಹಾ ಕುಲಗೇಡಿ ಕೆಲಸ ಮಾಡಲು ಸಜ್ಜಾಗುತ್ತಾನೆ. ಹಣದ ನೋಟಿಗೆ ಹೆಚ್ಚು ಬೆಲೆ ಕೊಡುವ ನಾವುಗಳು ಅದರಲ್ಲಿರುವ ಗಾಂಧೀಜಿಯ ವ್ಯಕ್ತಿತ್ವವನ್ನು ಗುರುತಿಸುವುದಿಲ್ಲ. ಬ್ರಹ್ಮಸೂತ್ರದಲ್ಲಿ ಉಲ್ಲೇಖಿಸಿದ ಹನ್ನೊಂದು ವ್ರತಗಳನ್ನು ಆಚರಿಸಿ ಬದುಕಿದವರು ಗಾಂಧೀಜಿ. ಪ್ರಪಂಚದಲ್ಲಿರುವ ಎಲ್ಲರೂ ಗಾಂಧೀ ತತ್ವವನ್ನು ಪಾಲಿಸದಿರಲು ಕಾರಣವೆಂದರೆ ಅವನ ಮನೆಯವರು ಮತ್ತು ಸುತ್ತಲಿನ ಸಮಾಜದ ಪ್ರಭಾವ. ಜೀವವನ್ನು ಪ್ರೀತಿಸುವುದು ಜೀವನವಾಗಿದೆ. ಇತರರ ಒಳಿತನ್ನು ಸಂಭ್ರಮಿಸುವ ಮನಸ್ಥಿತಿ ಜೀವನದ ಚೈತ್ರಯಾತ್ರೆ ಎನಿಸಿಕೊಳ್ಳುತ್ತದೆ.

ವಯಸ್ಸಿನ ಅನುಭವದ ಜ್ಞಾನ ಪಡೆದರೂ ಒಲಿಯದ ಆಧ್ಯಾತ್ಮ ಜ್ಞಾನ ಅವಧೂತರಿಗೆ ಇಷ್ಟು ಸಣ್ಣ ವಯಸ್ಸಿನಲ್ಲೇ ಒಲಿಯಿತು ಎಂಬ ಪ್ರಶ್ನೆಗೆ ಉತ್ತರ, ಆಧ್ಯಾತ್ಮ ಜ್ಞಾನ ಪಡೆಯಲು ವಯಸ್ಸಿನ ಮಿತಿಯಿಲ್ಲ ಜ್ಞಾನೋದಯವಾದ ಸಮಯ ಮುಖ್ಯ. ತನ್ನ ಹುಟ್ಟಿನ ಅರ್ಥವನ್ನು ಕಂಡುಕೊಂಡ ದಿನವೇ ಒಬ್ಬ ವ್ಯಕ್ತಿಯ ಪಾಲಿಗೆ ನಿಜವಾದ ಹುಟ್ಟಿದ ಹಬ್ಬ. ಪ್ರಸ್ತುತ ವಿದೇಶಿ ಪ್ರಭಾವ ಪ್ರತಿಯೊಂದು ರಂಗದಲ್ಲೂ ಕಾಣ ಸಿಗಬಲ್ಲದ್ದಾಗಿದೆ. ತಾನು ಖಾದಿ ಧರಿಸಿದ ಉದ್ದೇಶವು ನಮ್ಮ ಸಂಸ್ಕ್ರತಿಯನ್ನು ಪ್ರತಿನಿಧಿಸುವುದೇ ಆಗಿದೆ. ನಮ್ಮ ದೇಶದ ವಸ್ತ್ರಾಚರಣೆಗಳಿಗೆ ನಾವು ಗೌರವವನ್ನು ನೀಡದಿದ್ದರೆ ವಿದೇಶಿಗರ ಗೌರವ ಪಡೆಯುವ ಯೋಚನೆ ನಿಷ್ಪ್ರಯೋಜಕ. ಇತಿಹಾಸದಲ್ಲಿ ಮಹಾತ್ಮರು ಎನಿಸಿದವರೆಲ್ಲಾ ತನ್ನ ಜನ್ಮದ ನಿಜಾರ್ಥವನ್ನು ಕಂಡುಕೊಂಡವರೇ ಆಗಿದ್ದಾರೆ. ಎಷ್ಟು ಸಮಯ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ್ದ ಸಮಯದಲ್ಲಿ ಮಾಡಿದ ಸಾಧನೆ ಏನು ಎನ್ನುವುದು ಮುಖ್ಯ. ಪುನೀತ್ ರಾಜ್ ಕುಮಾರ್ ಮತ್ತು ಸಿದ್ಧಗಂಗಾ ಶ್ರೀಗಳ ಜೀವನ ಇದಕ್ಕೆ ಉತ್ತಮ ನಿದರ್ಶನ. ವಿವೇಕಾನಂದರು ಮತ್ತು ಸತ್ಯ ಸಾಯಿ ಬಾಬಾ ತನ್ನ ಬದುಕಿನಲ್ಲಿ ಆಧ್ಯಾತ್ಮ ಸಾಧನೆಗೈದವರು. ಸಹಜವಾಗಿ ಬದುಕುವವರು ಜೀವನದಲ್ಲಿ ಒಂದು ದಿನ ಸಹಜ ಸತ್ಯವನ್ನು ಕಂಡುಕೊಳ್ಳುತ್ತಾರೆ. ನಮ್ಮ ತಪ್ಪನ್ನು ಅಧ್ಯಯಿಸಿ ಸರಿಪಡಿಸಿಕೊಂಡಾಗ ಆತ್ಮಸಾಕ್ಷಾತ್ಕಾರ ಸ್ವಾಭಾವಿಕವಾಗಿಯೇ ಆಗುತ್ತದೆ. ಆಧ್ಯಾತ್ಮವೇ ಬೆಳಕು. ಆ ಬೆಳಕಿಗೆ ಕೈ ಅಡ್ಡವಿಟ್ಟಾಗ ಅದು ನಮಗೆ ತೋರುವುದಿಲ್ಲ. ಈ ಬೆಳಕಿನಿಂದಲೇ ಪ್ರಕೃತಿ ಬೆಳಗುತ್ತದೆ. ಯೋಗಿಗಳು ಚೈತನ್ಯವನ್ನು ಉಳಿಸಿಕೊಳ್ಳುವ ಕಾರಣ ನೂರಾರು ವರ್ಷಗಳ ಕಾಲ ಬದುಕುತ್ತಾರೆ. ಆದರೆ ಪ್ರಸ್ತುತ ಜನಾಂಗವು ಚೈತನ್ಯವನ್ನು ಮೋಜು ಮಸ್ತಿಗಳಲ್ಲಿ ಹಾಳುಗೆಡವುತ್ತಿದ್ದಾರೆ. ತೇಜಸ್ಸು ಕಳೆಗುಂದಿದಂತೆ ಪ್ರೇತಕಳೆ ಆವರಿಸುತ್ತದೆ. ವಿವೇಕದಿಂದ ಜ್ಞಾನವನ್ನು ನೋಡಿದಾಗ ಅದು ವಿಜ್ಞಾನವಾಗುತ್ತದೆ. ನಮ್ಮ ಜ್ಞಾನವನ್ನು ಮೀರಿದ ಶಕ್ತಿಯನ್ನು ವಿರೋಧಿಸದೆ ಒಪ್ಪಿಕೊಳ್ಳುವ ವಿವೇಕ ಬೆಳೆಯಬೇಕು. ದೇವರು ತಾನು ಸರ್ವಶಕ್ತ ಎನ್ನುವುದನ್ನು ಪರೀಕ್ಷೆಗಳ ಮೂಲಕ ನಿರೂಪಿಸುತ್ತಾನೆ. ಮನುಷ್ಯನ ಗರ್ವಭಂಗವನ್ನು ದೇವರು ನಾನಾ ಅವತಾರದ ಮೂಲಕ ನಾಶ ಮಾಡಿದ್ದಾನೆ. ಒಳ್ಳೆಯ ಮತ್ತು ಕೆಟ್ಟ ಚಿಂತನೆಗಳನ್ನು ಚಿತ್ತದಲ್ಲಿ ತುಂಬುವವನು ಭಗವಂತನೇ ಆಗಿದ್ದಾನೆ. ಪ್ರಸ್ತುತ ಜಗತ್ತಿನಲ್ಲಿ ಆದರ್ಶಗಳು ಕಣ್ಮರೆಯಾಗಿದೆ.

ದಿನ ನಿತ್ಯ ಪ್ರಾಣಿಗಳೊಂದಿಗೆ ವಾಸಿಸುವವನಿಗೆ ಪ್ರಾಣ ಭಯದ ಸಾಧ್ಯತೆ ಕಡಿಮೆ ಇರುತ್ತದೆ. ಪ್ರತಿಯೊಬ್ಬನಿಗೂ ಅನ್ನ ನೀಡುವ ರೈತನ ಪಾಲಿಗೆ ಅವನ ಜೀವನವೇ ತಪಸ್ಸಾಗಿರುತ್ತದೆ. ತನ್ನನ್ನು ತಾನು ಜಗತ್ತಿಗೆ ದಾನವಾಗಿ ಸಮರ್ಪಿಸಿಕೊಂಡು ಶ್ರಮ ಪಡುವ ವರ್ಗವೇ ರೈತಾಪಿ ವರ್ಗ. ಸದಾ ಕಾಲ ಅನ್ನ ನೀಡುವ ರೈತನಿಗೆ ಕೃತಜ್ಞತೆ ತೋರುವುದು ಪ್ರತಿಯೊಬ್ಬನ ಕರ್ತವ್ಯ. ಪ್ರಸ್ತುತ ಜನಾಂಗದಲ್ಲಿ ಒಂದು ಬಗೆಯ ಘನತೆಯನ್ನು ಕಾಪಿಟ್ಟುಕೊಳ್ಳುವುದೇ ಹಿರಿಮೆಯ ವಿಚಾರ ಎಂದೆನಿಸಿಕೊಂಡಿದೆ. ಅರ್ಥವನ್ನೇ ಅರಿಯದೆ ಅಭ್ಯಾಸ ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ನಮ್ಮತನ, ನಮ್ಮ ಸಂಸ್ಕಾರ, ನಮ್ಮ ಜೀವನಶೈಲಿಯನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾವುದೇ ನಕಾರಾತ್ಮಕ ವಿಚಾರಗಳನ್ನು ಆದರ್ಶ ಗುಣದ ಅಳವಡಿಕೆಯ ಮೂಲಕ ಸರಿ ಮಾಡುವ ಸಾಧ್ಯತೆ ಇದೆ. ಖಾಯಿಲೆಯ ಮೂಲ ಗುಟ್ಟು ಮನಸ್ಸೇ ಆಗಿದೆ. ಒಬ್ಬ ರೋಗಿಯ ಪಾಲಿಗೆ ವೈದ್ಯ ದೇವರಾಗಿರುತ್ತಾನೆ. ಆ ದೇವರಲ್ಲಿ ಭಕ್ತನಿಗೆ ಭಯ, ಕಳಂಕ, ಮೋಸ ಮತ್ತು ನಾಟಕ ಬುದ್ಧಿಗಳು ಇರುವುದಿಲ್ಲ. ವೈದ್ಯರು ಮತ್ತು ಗುರುಗಳ ಬಳಿ ಯಾವುದೇ ಕಾರಣಕ್ಕೂ ಸುಳ್ಳನ್ನಾಡಬಾರದು. ಎದುರಿಗಿನ ವ್ಯಕ್ತಿ ಎಂತಹವನೇ ಆದರೂ ಅವನನ್ನು ಸರಿ ಮಾಡುವ ಜವಾಬ್ದಾರಿ ಇವರಿಬ್ಬರ ಮೇಲಿರುತ್ತದೆ. ಒಬ್ಬ ವೈದ್ಯನಿಗೆ ರೋಗಿಯ ಜೊತೆಗಲ್ಲ ರೋಗದ ಜೊತೆಗೆ ಯುದ್ಧವಿರುತ್ತದೆ. ಒಬ್ಬ ಗುರುವೂ ಶಿಷ್ಯನ ಕೆಟ್ಟ ಮನಸ್ಥಿತಿಯನ್ನು ಬದಲಿಸುವ ಸಮಯಕ್ಕೆ ಕಾಯುತ್ತಾನೆ. ವಿವೇಕಾನಂದರು ಮತ್ತು ಶರೀಫರು ಗುರುಭಕ್ತಿಗೆ ಸಾಕ್ಷಿಗಳಾಗಿದ್ದಾರೆ. ಮನಸ್ಸು ಉನ್ಮಾದವನ್ನು ಪಡೆಯುತ್ತಾ ಹೋದಂತೆ ಇತರ ವಿಷಯಗಳನ್ನು ಮರೆಯುತ್ತದೆ. ಆಧ್ಯಾತ್ಮವೆಂದರೆ ಕನಿಷ್ಠ ಜ್ಞಾನದಿಂದ ಗರಿಷ್ಠ ಜ್ಞಾನದೆಡೆಗಿನ ಪಯಣವಾಗಿದೆ. ಸಮಯ ಸರಿದಂತೆ ಆತ್ಮ ಪರಮಾತ್ಮವಾಗುತ್ತದೆ. ಪ್ರಾಣ ಪರಮಾತ್ಮನಾಗಲು ಹಲವು ಮಾರ್ಗಗಳಿವೆ. ಎಲ್ಲದರ ಅಂತಿಮ ಗುರಿ ಪರಮಾತ್ಮನನ್ನು ತಲುಪುವುದು. ಜ್ಞಾನ ಎಲ್ಲಾ ಬಗೆಯ ವ್ಯಕ್ತಿಗಳ ಪಾಲಾಗಿದೆ. ಜ್ಞಾನಿಯ ಚಿಂತನೆಗೂ, ಸಾಮಾನ್ಯ ವ್ಯಕ್ತಿಯ ಚಿಂತನೆಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮನ್ನು ಮನುಷ್ಯರು ಎಂದು ಇತರರು ಗುರುತಿಸಿದ ಕಾರಣ ಮನುಷ್ಯ ಎನ್ನುವ ಅಸ್ತಿತ್ವ ನಮ್ಮಲ್ಲಿದೆ. ಒಬ್ಬ ವ್ಯಕ್ತಿಯ ಅಧಿಕಾರ ವಿವೇಕ ಮತ್ತು ಸಂಸ್ಕಾರದಿಂದ ಪ್ರತಿಫಲಿಸಲ್ಪಡುತ್ತದೆ. ನಾನು ದೇಹ ಎನ್ನುವುದು ಇತರರಿಂದ ಬೋಧಿಸಲ್ಪಟ್ಟಿರುವ ವಿಷಯ ಆದರೆ ಇದರ ಸತ್ಯಾಸತ್ಯತೆ ಯಾರಿಗೂ ತಿಳಿದಿಲ್ಲ. ಶುದ್ಧ ಸಂಬಂಧಕ್ಕೆ ದೇಹ ಸಂಬಂಧದ ಮಿತಿ ಇಲ್ಲ ಎನ್ನುವ ನಿದರ್ಶನಗಳು ಪುರಾಣದಲ್ಲಿದೆ. ಪುರಾಣದ ಕಾಲದಲ್ಲೇ ಹಲವಾರು ಬಗೆಯ ವೈದ್ಯಕೀಯ ವಿಸ್ಮಯಗಳ ಪರಿಚಯವಾಗಿತ್ತು. ಕಲ್ಪವೃಕ್ಷದಂತಹಾ ಭಾರತ ದೇಶದಲ್ಲಿ ಅಲ್ಪ ಬುದ್ಧಿಯಿಂದ ನಾವೆಲ್ಲಾ ಹಾಳಾಗುತ್ತಿದ್ದೇವೆ. ದೇಹ, ಜೀವಗಳೆಂಬ ಭ್ರಮೆಯಾಚೆಗೆ ಹುಟ್ಟುವ ಪ್ರಶ್ನೆಯಿಂದ ಆಧ್ಯಾತ್ಮ ಶುರುವಾಗುತ್ತದೆ. ಆತ್ಮವೊಂದನ್ನು ಬಿಟ್ಟು ಪ್ರತಿಯೊಂದು ಬದಲಾಗುತ್ತದೆ. ಆತ್ಮದ ಅಧ್ಯಯನದಿಂದ ಆಧ್ಯಾತ್ಮ ಆರಂಭವಾಗುತ್ತದೆ. ಕಲಿಯುಗದಲ್ಲಿ ಯುಗಧರ್ಮ ಪಾಲನೆ ಹೇಗೆ ಎಂಬ ಪ್ರಶ್ನೆಗೆ ಉತ್ತರ. ಈ ಯುಗಕ್ಕೆ ಸರಿಯಾಗಿ ಹಿಂದಿನ ನಿಯಮಾವಳಿಗಳನ್ನು ಸಡಿಲಿಸಿಕೊಂಡು ಬದುಕುವುದು. ಋಷಿಗಳ ಕಾಲದ ಅನುಷ್ಠಾನಗಳು ಪಾಲಿಸಲು ಪ್ರಸ್ತುತ ಸಾಧ್ಯವಿಲ್ಲ. ಎಲ್ಲವೂ ಅಶುದ್ಧವಾಗಿದೆ. ಮಾನವ ದಾನವನಾಗುವುದು ಚಿಂತನೆಯ ಫಲದಿಂದ. ಕಲಿ ಎನ್ನುವುದು ಕಲ್ಮಶದ ಸಂಕೇತ. ಹೀಗಾಗಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಪ್ರಯತ್ನಿಸಬೇಕು. ಅನಾವಶ್ಯಕ ವಸ್ತುಗಳಿಂದ ಮನಸ್ಸು ಮತ್ತು ದೇಹದ ಆರೋಗ್ಯ ಕ್ಷೀಣಿಸುತ್ತದೆ. ಹೀಗಾಗಿ ಇದು ಅನಗತ್ಯ ಕರ್ಮವಾಗುತ್ತದೆ. ತನ್ನ ಮಿತಿಯನ್ನು ಕಂಡುಕೊಂಡ ದಿನ ಮನುಷ್ಯ ಸರಿ ಹೋಗುತ್ತಾನೆ. ಮಿತಿಯನ್ನು ಮೀರಿದಾಗಲೇ ಖಾಯಿಲೆಗಳು ಆವರಿಸುವುದು. ಸಹಜವಾದ ಜೀವನವನ್ನು ಹಾಳುಗೆಡವಿ ಸಾಧಿಸುವಂತಹುದು ಏನೂ ಇಲ್ಲ. ಅತಿಯಾದ ಉತ್ಸಾಹ ಮತ್ತು ಕೊರಗುವಿಕೆಯಿಂದ ಆಪತ್ತು ಸಂಭವಿಸುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದನ್ನು ಸ್ವೀಕರಿಸುತ್ತಾ ಹೋದಾಗ, ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜಗತ್ತಿನಲ್ಲಿ ಉಚಿತವಾಗಿ ಸಿಗುವುದು ಸಲಹೆ ಮತ್ತು ಠೀಕೆ. ಒಂದನ್ನೇ ಪರಮ ಸತ್ಯ ಎಂದು ಒಪ್ಪಿಕೊಳ್ಳಬೇಕೆಂದೇನಿಲ್ಲ. ಪರಮಾತ್ಮನ ಕಡೆಗೆ ಹೋಗಲು ಬೇರೆ ಬೇರೆ ದಾರಿಯಿದೆ. ಆಧ್ಯಾತ್ಮ ಸಾಧನೆಯ ಸುಲಭ ದಾರಿಯೇ ಸೇವೆ. ಸೇವೆಯು ದೇಹ ಮತ್ತು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಹಾನ್ ಚಿಂತಕರೆಲ್ಲರೂ ಈ ಮಾರ್ಗವನ್ನೇ ಪಾಲಿಸಿದ್ದಾರೆ. ದೇವಧೂತರೆನಿಸಿದವರು ಸರ್ವಾಂತರ್ಯಾಮಿಯ ಸಹಾಯದಿಂದ ಸೇವೆ ಸಲ್ಲಿಸುತ್ತಾರೆ. ಭಾರತದಲ್ಲಿ ದೊರಕುವ ಸಣ್ಣ ಸಣ್ಣ ವಿಷಯವನ್ನು ಅಧ್ಯಯಿಸಿದರೂ ಅಸಂಖ್ಯ ಜ್ಞಾನ ಪ್ರಾಪ್ತವಾಗುತ್ತದೆ. ಧರ್ಮದ ಚೌಕಟ್ಟನ್ನು ಹಾಕಿಕೊಂಡವರು ನಾವೇ ಆಗಿದ್ದೇವೆ. ಪ್ರತಿಯೊಂದು ಧರ್ಮವೂ ಎಲ್ಲರೂ ಒಂದು ಎನ್ನುವುದನ್ನೇ ನಿರೂಪಿಸಿದೆ. ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಅಹಿಂಸೆ. ದ್ವೇಷ ಭಾವದಿಂದ ಹೊರಬಂದಾಗ ದೇಶ ಕಟ್ಟಲು ಸಾಧ್ಯವಾಗುತ್ತದೆ.