You are currently viewing ಗೃಹ ನಿರ್ಮಾಣದಲ್ಲಿ ಗೃಹಿಣಿಯ ಪಾತ್ರ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಗೃಹ ನಿರ್ಮಾಣದಲ್ಲಿ ಗೃಹಿಣಿಯ ಪಾತ್ರ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಭಾರತದ ಶ್ರೇಷ್ಠ ಆಧ್ಯಾತ್ಮ ಯೋಗಿಗಳಲ್ಲಿ ಒಬ್ಬರೆನಿಸಿರುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಜ್ಞಾನಸಾಗರದ ಅಂಶಗಳನ್ನು ಪದಗಳ ರೂಪದಲ್ಲಿ ಭಕ್ತ ಅನುಯಾಯಿಗಳೆದುರು ಪ್ರಸ್ತುತ ಪಡಿಸುತ್ತಿದ್ದೇವೆ. ಈ ಲೇಖನದಲ್ಲಿ ಅವಧೂತರು ಸ್ತ್ರೀ ಎಂದರೆ ಯಾರು? ಗೃಹದ ಒಳಿತು ಕೆಡುಕುಗಳಲ್ಲಿ ಗೃಹಿಣಿಯ ಪಾತ್ರ ಹೇಗಿರಬೇಕು ಎನ್ನುವುದರ ಬಗ್ಗೆ ವ್ಯಕ್ತಪಡಿಸಿರುವ ಅನುಭಾವ ನುಡಿಗಳ ಸಂಗ್ರಹದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ಸ್ತ್ರೀ ತ್ರಿಗುಣ ಸ್ವರೂಪಿಣಿಯಾಗಿದ್ದಾಳೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಸಮೀಕರಿಸಿ ತನಗರಿವಿಲ್ಲದಂತೇ ದೇವತಾ ಕೆಲಸ ಮಾಡುತ್ತಿರುವವರು ಸ್ತ್ರೀಯರು. ದೇಶ ಕಾಯುವ ಯೋಧ ಮತ್ತು ಮಣ್ಣಿನ ಋಣ ಸಂದಾಯ ಮಾಡುವ ರೈತನ ತ್ಯಾಗದಷ್ಟೇ ಹೆಚ್ಚಿನ ತ್ಯಾಗವನ್ನು ಸ್ತ್ರೀಯೂ ತನ್ನ ಜೀವನದ ವಿವಿಧ ಹಂತಗಳಲ್ಲಿ ನಿಭಾಯಿಸುತ್ತಾಳೆ. ತನ್ನ ಪ್ರಾಣವನ್ನು ಪಣಕ್ಕಿಟ್ಟು ಮತ್ತೊಂದು ಜೀವದ ಹುಟ್ಟಿಗೆ ಕಾರಣವಾಗುವ ಸ್ತ್ರೀ ನಿಜಕ್ಕೂ ಶ್ರೇಷ್ಠಳು ಎನಿಸಿದ್ದಾಳೆ. ಒಬ್ಬ ಹೆಣ್ಣಿಗೆ ಮನೆ ನಿರ್ವಹಣೆಯ ಚಾತುರ್ಯತೆ ಹುಟ್ಟಿನಿಂದಲೇ ಬಂದಿರುತ್ತದೆ. ಅದಕ್ಕೆ ಶಿಕ್ಷಣದ ಅಗತ್ಯವಿರುವುದಿಲ್ಲ. ಯಾವ ಹೆಣ್ಣೂ ತನ್ನ ಕೆಲಸಕ್ಕಾಗಿ ಪ್ರಶಸ್ತಿ-ಪುರಸ್ಕಾರಗಳನ್ನು ಅಪೇಕ್ಷಿಸುವುದಿಲ್ಲ. ಆದರೆ ಹೆಣ್ಣಿನ ಮನಸ್ಸಿನಲ್ಲಿ ತಾನೆಷ್ಟೇ ಕೆಲಸ ಮಾಡಿದರೂ ತನ್ನನ್ನು ತಿಳಿಯುವ ಪ್ರಯತ್ನವನ್ನು ಏಕೆ ಮಾಡುವುದಿಲ್ಲ ಎನ್ನುವ ನೋವು ಕಾಡುತ್ತಲೇ ಇರುತ್ತದೆ. ಆ ನೋವನ್ನು ಮರೆಸುವಂತಹ ಗೌರವವನ್ನು ಪುರುಷ ಸಮೂಹ ಮಾಡಬೇಕಿದೆ. ಮನೆಯಲ್ಲಿ ಯಾರೇ ಅನಾರೋಗ್ಯ ಪೀಡಿತರಾದರೂ ಉಪಚರಿಸುವವಳು ಹೆಣ್ಣೇ ಆಗಿರುತ್ತಾಳೆ. ತನ್ನ ಹಸಿವನ್ನೂ ಲೆಕ್ಕಿಸದೆ ತನ್ನ ಮನೆಯವರ ಹೊಟ್ಟೆ ತುಂಬಿಸುವ ಎಷ್ಟೋ ಮಹಿಳೆಯರಿದ್ದಾರೆ. ಹೀಗಾಗಿ ಒಬ್ಬ ಹೆಣ್ಣಿಗೆ ಕೊಡಬೇಕಾದ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ಪುರುಷನೂ ನೀಡಬೇಕು. ಇದರಿಂದ ಮಹಿಳಾ ದಿನಾಚರಣೆ, ನವರಾತ್ರಿ, ಗೌರಿ ಹಬ್ಬಗಳಂತಹ ಆಚರಣೆಗಳು ಅರ್ಥಪೂರ್ಣವಾಗುತ್ತದೆ. ಸನಾತನ ಧರ್ಮದಲ್ಲಿರುವ ಹಬ್ಬಗಳೂ ಸ್ತ್ರೀಯ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದಲೇ ಆಚರಿಸಲ್ಪಡುತ್ತದೆ. ಹಿಂದಿನ ಹಬ್ಬಗಳಿಂದ ಹೆಣ್ಣಿನ ಗೌರವದ ಬಗ್ಗೆ ಅರಿವು ಮೂಡುತ್ತಿತ್ತು. ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಗೂಡಾರ್ಥ ಎಲ್ಲರನ್ನೂ ಒಗ್ಗೂಡಿಸುವ ಪ್ರಕ್ರಿಯೆಯಾಗಿದ್ದು ಇದನ್ನು ಅರಿತು ಮಾಡಿದಾಗ ಆ ಆಚರಣೆಗೆ ಪೂರ್ಣತ್ವ ಪ್ರಾಪ್ತವಾಗುತ್ತದೆ.

ಗೃಹದ ತಾಯಿಬೇರು ಗೃಹಿಣಿ. ಗೃಹಿಣಿಯೊಬ್ಬಳು ಮನೆಗೆ ವಾಸ್ತುವಿದ್ದಂತೆ. ಮನೆಯ ಪ್ರತಿಯೊಬ್ಬರೂ ಅವಲಂಬಿತರಾಗುವುದು ಗೃಹಿಣಿಯಲ್ಲೇ. ಹೆಣ್ಣಿಗೆ ಗೌರವ ಸಿಗುವ ಜಾಗ ಅಭಿವೃದ್ಧಿಯಾಗುತ್ತದೆ ಎಂದು ಧರ್ಮಶಾಸ್ತ್ರಗಳು ಪ್ರತಿಪಾದಿಸುತ್ತಾ ಬಂದಿದೆ. ಪ್ರತೀ ಧರ್ಮದಲ್ಲೂ ಹೆಣ್ಣಿಗೆ ಪೂಜನೀಯ ಸ್ಥಾನವನ್ನು ಕಲ್ಪಿಸಲಾಗಿದೆ. ಸನಾತನ ಧರ್ಮದಲ್ಲಿ ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸಲಾಗಿದೆ. ದೇವಿ ಎಂದರೆ ಬೆಳಕು ಎಂದರ್ಥ ಇದೇ ಕಾರಣಕ್ಕೆ ಹೆಣ್ಣನ್ನು ದೇವಿ ಎನ್ನುವುದು. ಜೀವನವಿಡೀ ತ್ಯಾಗಮೂರ್ತಿಯಾಗಿ ಬಾಳುವ ವ್ಯಕ್ತಿತ್ವ ಹೆಣ್ಣಿನದು. ಗ್ರಹಗಳು ಸೂರ್ಯನನ್ನು ಆಧರಿಸುವಂತೆ ಗೃಹವು ಗೃಹಣಿಯನ್ನು ಆಧರಿಸಿರುತ್ತದೆ. ಸನಾತನ ಧರ್ಮದ ಪ್ರಕಾರ ಗೃಹಿಣಿ ಧರಿಸುವ ಪ್ರತಿಯೊಂದು ವಸ್ತುವೂ ವೈಜ್ಞಾನಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಹೆಣ್ಣಲ್ಲಿ ಮುಂಗೋಪ ಜಾಸ್ತಿ ಏಕೆಂದರೆ ಆಕೆ ಮೋಹದಲ್ಲಿರುತ್ತಾಳೆ. ಜಗತ್ತಿನ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಅವಲಂಬಿತವಾಗಿರುವುದು ಹೆಣ್ಣಿನ ಮೇಲೆ. ಪಂಚಭೂತಗಳೂ ಸೇರಿ ದಯೆಯ ಪ್ರತೀಕ ಧರಿಸಿದರೆ ಆಕೆಯನ್ನು ಹೆಣ್ಣು ಎನ್ನಲಾಗುತ್ತದೆ. ಒಬ್ಬ ಗೃಹಿಣಿ ಧರ್ಮಯುಕ್ತ ಮತ್ತು ಮೋಹಮುಕ್ತವಾದಾಗ ಮನೆ ಉದ್ಧಾರವಾಗುತ್ತದೆ.

ಪ್ರಸ್ತುತ ಆಧುನಿಕತೆಯ ಸ್ಪರ್ಷ ಗೃಹಿಣಿ ಧರ್ಮಕ್ಕೂ ಕಾಲಿರಿಸಿದೆ, ಆಧುನಿಕ ಜೀವನಶೈಲಿ ಸಂಸ್ಕ್ರತಿಯ ಸಭ್ಯತೆಯನ್ನು ಮರೆಸುವಷ್ಟು ಮುನ್ನೆಡೆಯಲ್ಲಿದೆ. ಧನಾತ್ಮಕ ಚಿಂತನೆಯಲ್ಲಿ ಸಾಗುತ್ತಿದ್ದ ಭವ್ಯ ಭಾರತೀಯ ಪರಂಪರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಲುಕಿ ಮೂಲ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಆಧುನಿಕ ಯುಗದಲ್ಲಿ ಇತರರ ಹೊಗಳಿಕೆಯ ಹಪಹಪಿಯೇ ಹೆಚ್ಚು ಇದರಿಂದಲೇ ತನ್ನ ಮಕ್ಕಳ ಬಗೆಗೆ ಕಾಳಜಿ ವಹಿಸುವಷ್ಟೂ ಸಮಯವನ್ನು ತಾಯಂದಿರು ಮೀಸಲಿಡುತ್ತಿಲ್ಲ. ದೇಶ ನಿರ್ಮಾಣದ ಹಿಂದೆ ಗೃಹಿಣಿಯೊಬ್ಬಳು ಅತ್ಯಂತ ಮುಖ್ಯ ಪಾತ್ರ ವಹಿಸುತ್ತಾಳೆ. ಗೃಹಿಣಿಯೊಬ್ಬಳ ತಪ್ಪು ಗೃಹನಾಶಕ್ಕೆ ನಾಂದಿ ಹಾಡಬಹುದು. ಧರ್ಮಯುಕ್ತವಾದ ಸಮಾಜ ನಿರ್ಮಾಣಕ್ಕೆ ಗೃಹಿಣಿಯ ಧರ್ಮಾಚರಣೆಯೂ ಮೂಲವಾಗುತ್ತದೆ.

ಗೃಹಕ್ಕೆ ಗೃಹಿಣಿಯೇ ಆಧಾರಸ್ತಂಭ. ಮನೆಯಲ್ಲಿರುವ ಹೆಣ್ಣೇ ಆ ಮನೆಗೆ ವಾಸ್ತುವಿದ್ದಂತೆ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆಗಿಂತ ಹೆಚ್ಚಿನ ಪಾತ್ರವನ್ನು ತಾಯಿಯೇ ವಹಿಸುತ್ತಾಳೆ. ಸನಾತನ ಧರ್ಮ ಶಾಸ್ತ್ರಗಳು ಇದೇ ಕಾರಣಕ್ಕೆ ಮಾತೃದೇವೋಭವ ಎನ್ನುವುದನ್ನು ಮೊದಲ ಸಾಲಿನಲ್ಲೇ ಉಲ್ಲೇಖಿಸಿರುವುದು. ಮಗುವೊಂದು ತನ್ನ ಹುಟ್ಟಿನ ನಂತರ ಮೊದಲು ಕಾಣುವ ಮುಖ ತಾಯಿಯದ್ದೇ ಆಗಿರುತ್ತದೆ. ಒಬ್ಬ ಹೆಣ್ಣು ಪ್ರತೀ ಹಂತದಲ್ಲೂ ಪುರುಷನಿಗೆ ಗುರುವಾಗುತ್ತಾಳೆ. ತನ್ನ ತಂದೆಗೆ ಸಹನಾ ಧರ್ಮವನ್ನು, ಗಂಡನಿಗೆ ಅರಿವನ್ನು ಮತ್ತು ಮಕ್ಕಳಿಗೆ ವಾತ್ಸಲ್ಯದ ಪಾಠ ಹೇಳಿಕೊಡುವ ಮಹಾಗುರು ಹೆಣ್ಣು. ಪುರುಷನಿಗೆ ಹೋಲಿಸಿದರೆ ಮಹಿಳೆಯರಲ್ಲಿ ಛಲದ ಅಂಶ ದುಪ್ಪಟ್ಟಿರುತ್ತದೆ. ಪುರಾಣ ಇತಿಹಾಸಗಳಲ್ಲಿ ಹೆಣ್ಣಿನ ಛಲದ ಬಗ್ಗೆ ಹಲವಾರು ನಿದರ್ಶನಗಳಿವೆ. ಹೆಣ್ಣು ಅಗ್ನಿಯ ಪ್ರತೀಕ ಹೀಗಾಗಿ ಆಕೆ ಹುಟ್ಟಿನಿಂದಲೇ ಪವಿತ್ರಳು. ಗೃಹಿಣಿಗಷ್ಟೇ ಗೃಹಸ್ಥ ಧರ್ಮ ಪಾಲನೆಯೇ ಗೃಹಸ್ಥನಿಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಗೃಹಸ್ಥನಿಗೂ ಹಲವು ಜವಾಬ್ದಾರಿಗಳಿವೆ ಆದರೆ ಗೃಹಸ್ಥ ಮುಖ್ಯವಾಗಿ ಗೃಹಿಣಿಯನ್ನೇ ಆಧರಿಸಿರುತ್ತಾನೆ. ಒಂದು ಮನೆಯಲ್ಲಿ ಪುರುಷನಿಲ್ಲದಿದ್ದರೂ ಆ ಮನೆಯ ನಿರ್ವಹಣೆಯಾಗುತ್ತದೆ ಆದರೆ ಒಬ್ಬ ಹೆಣ್ಣಿಲ್ಲದಿದ್ದರೆ ಮನೆಯ ಪರಿಸ್ಥಿತಿಯನ್ನು ಊಹಿಸಲೂ ಕಷ್ಟಸಾಧ್ಯ. ಗೃಹವಷ್ಟೇ ಅಲ್ಲ ಸೃಷ್ಠಿಯೇ ಹೆಣ್ಣನ್ನವಲಂಬಿಸಿದೆ. ಒಬ್ಬ ಗೃಹಿಣಿಗೆ ತನ್ನ ನಡತೆಯ ಮುಖೇನವಾಗಿ ಇತರರ ನಡವಳಿಕೆಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾಳೆ. ಸ್ತ್ರೀ ಪುರುಷ ಸಮಾನತೆ ಸಮಾಜಕ್ಕೆ ಅವಶ್ಯಕ ನಿಜ ಆದರೆ ಸ್ವಧರ್ಮದ ಆಚರಣೆಯನ್ನು ಬಿಟ್ಟು ತೋರಿಕೆಯ ಸಮಾನತೆ ಸಮಾಜಕ್ಕೆ ಅನಾವಶ್ಯಕ.