You are currently viewing ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾ ರಹಸ್ಯಗಳ ಬಗ್ಗೆ ಅವಧೂತರ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾ ರಹಸ್ಯಗಳ ಬಗ್ಗೆ ಅವಧೂತರ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಅನಂತ ಕಲ್ಯಾಣ ಪರಿಪೂರ್ಣ ಗುಣಗಳಿವೆ. ಮನುಷ್ಯನಲ್ಲಿ ಅನೇಕ ಗುಣಗಳಿವೆ ಆದರೆ ಪರಿಪೂರ್ಣತೆಯಿಲ್ಲ. ಭಗವಂತ ಸರ್ವಗುಣಗಳಲ್ಲೂ ಪರಿಪೂರ್ಣತೆಯನ್ನು ಸಾಧಿಸಿದ್ದಾನೆ. ಮನುಷ್ಯನ ಸೃಷ್ಠಿಗೆ ಕಾಲದ ಪರಿಮಿತಿಯಿದೆ ಆದರೆ ಭಗವಂತನ ಸೃಷ್ಠಿಗೆ ಕಾಲದ ಇತಿ ಮಿತಿಗಳಿಲ್ಲ. ನಾರಾಯಣನ ಎಲ್ಲಾ ಅವತಾರಗಳಲ್ಲಿ ಭೂಮಿಯಲ್ಲಿ ಹೆಚ್ಚು ಕಾಲ ಉಳಿದ ಅವತಾರಗಳು ರಾಮ ಮತ್ತು ಕೃಷ್ಣ. ಈ ಅವತಾರಗಳು ಸಾಮಾಜಿಕ ಪ್ರಜ್ಞೆಯನ್ನು ಮಾನವನಿಗೆ ಹೇಳಿಕೊಟ್ಟಿದೆ. ಕಲಿಯುಗದಲ್ಲಿ ಭಕ್ತರು ಭಗವಂತನ ಸ್ವರೂಪವನ್ನು ಕಾಣಲು ಪರಿತಪಿಸುತ್ತಿರುವಾಗ ಕರುಣಾಮಯಿ ಭಗವಂತ ನೇರವಾಗಿ ಧರೆಗಿಳಿದು ಬರುತ್ತಾನೆ. ಹೀಗೆ ಬಂದ ವೆಂಕಟೇಶ್ವರನು ಭೂವೈಕುಂಠ ಎನಿಸಿರುವ ತಿರುಪತಿಯ ಗಿರಿಯಲ್ಲಿ ನೆಲೆಯಾಗುತ್ತಾನೆ.

ತಿರುಪತಿ ಎನ್ನುವುದು ಭೂಮಿಯಲ್ಲಿರುವ ವಿಷ್ಣುಲೋಕವೇ ಆಗಿದೆ. ತಿರುಪತಿಯಲ್ಲಿ ನೆಲೆಯಾಗಿರುವ ಶ್ರೀನಿವಾಸನ ಅವತಾರಕ್ಕೆ ಅರ್ಚಾವತಾರ ಎಂದು ಹೆಸರು. ತಿರುಪತಿಯಲ್ಲಿರುವ ವಿಗ್ರಹವನ್ನು ಯಾರೂ ಕೆತ್ತಿಲ್ಲ. ಸ್ವಯಂ ಭಗವಂತನೇ ಅಲ್ಲಿ ಶಿಲೆಯಾಗಿ ನೆಲೆಸಿದ್ದಾನೆ. ಕಲಿಯುಗ ಕೊನೆಯಾಗುವಾಗ ಕಲ್ಲಿನ ರೂಪದಲ್ಲಿರುವ ಶ್ರೀ ವಿಷ್ಣು ತನ್ನ ಅವತಾರ ಕೊನೆಗೊಳಿಸಿ ದೇಹ ಧರಿಸುತ್ತಾನೆ. ತಿರುಪತಿಯ ವೆಂಕಟರಮಣನ ದಿವ್ಯ ವಿಗ್ರಹದಲ್ಲಿ ಶ್ರೀನಿವಾಸ ಕಲ್ಕಿಗೆ ಕೊಡಲಿರುವ ಖಡ್ಗವಿದೆ. ರಾಮಾನುಜರು ಮತ್ತು ಆದಿಶೇಷ ಶ್ರೀ ದೇವರ ಭುಜಗಳಲ್ಲಿ ನೆಲೆಕಂಡುಕೊಂಡಿದ್ದಾರೆ. ಶ್ರೀನಿವಾಸ ಓಂಕಾರ ಸ್ವರೂಪಿ. ಸೃಷ್ಠಿ, ಸ್ಥಿತಿ ಲಯಕ್ಕೆ ಕಾರಣನಾಗಿರುವ ವಿರಾಟ್ ವಿಷ್ಣು ತಿರುಪತಿಯಲ್ಲಿ ಶ್ರೀನಿವಾಸನಾಗಿ ಸ್ಥಿರವಾಗಿದ್ದಾನೆ. ವಿಷ್ಣುವಿನ ನಾಮದ ಒಳಗೆ ಭಗವಂತನ ಮೂರನೇ ಕಣ್ಣಿದೆ. ವಿಷ್ಣುವಿನ ರುದ್ರಸದೃಶ ಕಣ್ಣನ್ನು ನೋಡುವ ಶಕ್ತಿ ಸಾಮಾನ್ಯ ಮನುಷ್ಯರಿಗಿಲ್ಲ. ಹೀಗಾಗಿ ತಿರುಮಲದಲ್ಲಿ ಗುರುವಾರ ಕೆಂಪನ್ನವನ್ನು ಬಡಿಸಿ ವಿಷ್ಣುವಿನ ಕ್ರೋಧಶಕ್ತಿ ಆ ಅನ್ನಕ್ಕೆ ಸಂಚಲನವಾಗುವಂತೆ ಮಾಡಲಾಗುತ್ತದೆ. 

ವಿಜ್ಞಾನಿಗಳು ತಿರುಪತಿಯ ವಿಗ್ರಹವನ್ನು ಪರೀಕ್ಷಿಸಿ ಈ ವಿಗ್ರಹ ಭೂಲೋಕಕ್ಕೆ ಸೇರಿದ್ದಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ನಿತ್ಯ ಸ್ನಾನದ ನಂತರ ತಿರುಮಲದಲ್ಲಿರುವ ವೆಂಕಟೇಶ್ವರನ ವಿಗ್ರಹ ಬೆವರುತ್ತದೆ. ಶ್ರೀನಿವಾಸನ ತಲೆಕೂದಲು ಬೆಳೆಯುತ್ತಲೇ ಇದೆ. ಪರಮಾತ್ಮ ಸಾಕ್ಷಾತ್ ನೆಲೆಯಾಗಿರುವುದಕ್ಕೆ ಇಂತಹುದೇ ಅನೇಕ ಜೀವಂತ ದೃಷ್ಟಾಂತಗಳು ಸಿಗುತ್ತದೆ. ತಿರುಪತಿಯ ಗರ್ಭಗುಡಿಯೊಳಗೆ ಆಕಾಶಗಂಗೆ ಸ್ವಾಮಿಯ ಪಾದದಡಿಯಲ್ಲಿ ಹರಿಯುತ್ತಿದ್ದಾಳೆ. ತಿರುಪತಿಯ ಪೂಜೆಯ ನಂತರ ನಿರ್ಮಾಲ್ಯವನ್ನು ಗಂಗೆಯಲ್ಲಿ ವಿಸರ್ಜಿಸುತ್ತಾರೆ. ತಿರುಪತಿ ಗುಡ್ಡವೇ ನಾರಾಯಣನ ಸ್ವರೂಪವಾಗಿದೆ. ಅಲ್ಲಿರುವ ಏಳು ಬೆಟ್ಟಗಳು ಭಗವಂತ ಮಲಗಿದ್ದ ಸ್ವರೂಪವನ್ನು ಪ್ರತಿನಿಧಿಸುತ್ತದೆ. ತಿರುಪತಿಯಲ್ಲಿನ ಮಣ್ಣು ಈ ಲೋಕದ್ದಲ್ಲ ಎನ್ನುವುದು ಸಾಬೀತಾಗಿರುವ ಸತ್ಯ. ತಿರುಪತಿಯಲ್ಲಿರುವ ಕಲ್ಲುಗಳೆಲ್ಲವೂ ಸಾಲಿಗ್ರಾಮವೇ ಆಗಿದೆ. ಸಾಲಿಗ್ರಾಮದ ಕಲ್ಲಿನಲ್ಲಿ ಜೀವಂತಿಕೆ ಇರುತ್ತದೆ. ತಿರುಪತಿ ವೆಂಕಟರಮಣನ ಮೂರೂ ಕಣ್ಣಿನ ಬಾಹ್ಯ ದೃಷ್ಟಿ ಭಕ್ತರ ಮೇಲೆ ಬಿದ್ದಾಗ ಜೀವನ ಪಾವನವಾಗುತ್ತದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು ಮಹಾವಿಷ್ಣು ಪ್ರಸಾದಿಸುತ್ತಾನೆ. ತಿರುಪತಿಯಲ್ಲಿರುವ ಏಳು ದ್ವಾರಗಳು ಸಾಕ್ಷಾತ್ ವೈಕುಂಠದ ದ್ವಾರಗಳೇ ಆಗಿವೆ. ತಿರುಮಲದಲ್ಲಿ ಭಕ್ತರಿಗೆ ಒಳ್ಳೆಯ ಅನುಭೂತಿಯಾಗಲು ಕಾರಣ ಭಗವಂತ ಅಲ್ಲಿ ಜೀವಂತವಾಗಿ ನೆಲೆಸಿರುವುದು. ಕಲಿಯುಗದಲ್ಲಿ ಧರ್ಮ ಜಡವಾಗುತ್ತದೆ ಎನ್ನುವುದನ್ನು ನಿದರ್ಶಿಸಲು ವೆಂಕಟರಮಣ ಕಲ್ಲಾಗಿ ನೆಲೆಯಾಗಿದ್ದಾನೆ. 

ಮಹಾವಿಷ್ಣು ತನ್ನ ಅವತಾರಗಳ ಮುಖೇನ ಜಗತ್ತನ್ನು ಉದ್ಧರಿಸುತ್ತಿದ್ದಾನೆ. ಕಲ್ಕಿ ಸತ್ಯಯುಗದ ಆರಂಭ ಮಾಡಲು ಕಲಿಯುಗ ಕೊನೆಯಾಗಲೇ ಬೇಕಾಗುತ್ತದೆ. ತಿರುಪತಿಯಲ್ಲಿ 8 ತೀರ್ಥಗಳಿವೆ. ಕುಮಾರಧಾರಾ ನದಿಯ ಮೂಲ ತಿರುಪತಿಯಲ್ಲಿ ಇದೆ. ತಿರುಪತಿಯಲ್ಲಿ ಭಗವಂತನ ಅಸ್ಮಿತೆಯನ್ನು ಸಾಬೀತು ಪಡಿಸುವ ಪ್ರದೇಶಗಳಿವೆ. ಕುಬೇರ ಶ್ರೀನಿವಾಸನಿಗೆ ಸಾಲ ಕೊಟ್ಟದ್ದಕ್ಕೆ ಸಾಕ್ಷಿ ಈಗಲೂ ಇದೆ. ವೈಕುಂಠಕ್ಕೆ ಹೋಗಲು ಭೂಮಿಯಲ್ಲೇ ನಾಲ್ಕು ಗುಹೆಗಳಿವೆ. ತಿರುಮಲದ ಕ್ಷೇತ್ರಪಾಲ ಸಾಕ್ಷಾತ್ ಶಿವನೇ ಆಗಿದ್ದಾನೆ. ಶ್ರೀನಿವಾಸನು ವಿಮಾನ ವೆಂಕಟರಮಣನಾಗಿ ಆಶೀರ್ವಾದ ನೀಡಿದ್ದಾನೆ. ಹೀಗಾಗಿ ದೇವರ ಗೋಪುರದ ಮೇಲೆ ಹಾರಿ ಹೋದವರಿಗೆಲ್ಲಾ ತಕ್ಕ ಪಾಠವಾಗಿದೆ. ಹೀಗಾಗಿ ಶ್ರೀನಿವಾಸನ ದರ್ಶನಕ್ಕೆ ತಿರುಪತಿಗೆ ಹೋದಾಗ ಅಲ್ಲಿನ ಜೀವಂತಿಕೆಯ ಅನುಭೂತಿ ಪಡೆದುಕೊಳ್ಳುವುದು ಉತ್ತಮ