You are currently viewing ದೀಪಾವಳಿ ಹಬ್ಬದ ಹಿನ್ನೆಲೆ, ಆಚರಣೆ ಮತ್ತು ಅನುಷ್ಠಾನ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ದೀಪಾವಳಿ ಹಬ್ಬದ ಹಿನ್ನೆಲೆ, ಆಚರಣೆ ಮತ್ತು ಅನುಷ್ಠಾನ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ದೀಪಾವಳಿ ಹಬ್ಬವು ದೀಪದ ಬೆಳಕಿನಲ್ಲಿ ಆಧಾರವಾಗಿದೆ. ಶಾಸ್ತ್ರಗಳಲ್ಲಿ ಬೆಳಕನ್ನು ದೇವರು ಎಂದು ಸಂಬೋಧಿಸಲಾಗುತ್ತದೆ. ಮಹಾ ವೈರಾಗ್ಯ, ಮಹಾ ಐಶ್ವರ್ಯ, ಮಹಾ ಜ್ಞಾನ, ಸರ್ವಜ್ಞತ್ವ, ಸರ್ವ ಶಕ್ತಿತ್ವ ಮತ್ತು ಸರ್ವ ವ್ಯಾಪಕತ್ವ ಎನ್ನುವ ಷಡ್ಡೈಶ್ವರ್ಯ ಗುಣಗಳಿಂದ ಭಗವಂತ ಆರಾಧಿಸಲ್ಪಡುತ್ತಾನೆ. ಪಾಪ ಪುಣ್ಯ ಸೇರಿ ಮಣ್ಣಿನ ಹಣತೆ ಅಥವಾ ಶರೀರವಾದರೆ, ಎಣ್ಣೆ ಬತ್ತಿ ಸೇರಿ ಶಾಸ್ತ್ರವಾಗುತ್ತದೆ. ಯಾರು ಪಾಪ ಪುಣ್ಯಗಳನ್ನು ಸಮಾನವಾಗಿ ಮಾಡಿರುತ್ತಾರೋ ಅವರು ಮರ್ಥ್ಯ ಅಥವಾ ಭೂಲೋಕದಲ್ಲಿ ಜನ್ಮ ಪಡೆಯುತ್ತಾರೆ ಎನ್ನುವುದು ಭಗವದ್ಗೀತೆಯಲ್ಲಿ ಉಲ್ಲೇಖಿತವಾಗಿದೆ. ಪುಣ್ಯಗಳು ಕ್ಷೀಣವಾದಾಗ ಉನ್ನತ ಲೋಕಗಳಿಂದ ಆತ್ಮವು ಕೆಳ ಲೋಕಗಳಿಗೆ ಬರುತ್ತದೆ. ಕರ್ಮಭೂಮಿಯಾದ ಭೂಲೋಕದಲ್ಲಿ ವೇದೋಕ್ತ ಕರ್ಮಗಳನ್ನು ಮಾಡಿದ ಆತ್ಮವು ಮತ್ತೆ ಉನ್ನತ ಲೋಕಗಳತ್ತ ಪಯಣವನ್ನು ಬೆಳೆಸುತ್ತದೆ ಎಂದು ಶಾಸ್ತ್ರಗಳು ತಿಳಿಸಿದೆ. ವಿಷ್ಣುಲೋಕದ ದ್ವಾರಪಾಲಕರಾಗಿದ್ದ ಜಯ ವಿಜಯರು ಅಹಂಕಾರದಿಂದ ಮಾಡಿದ ಕರ್ಮಗಳು ಅವರನ್ನು ಭೂಲೋಕದಲ್ಲಿ ಅಸುರರಾಗಿ ಜನ್ಮ ತಾಳುವಂತೆ ಮಾಡಿತು. ಸುದರ್ಶನ ಚಕ್ರವು ಸಾಕ್ಷಾತ್ ನಾರಾಯಣನ ಎದುರು ಅಹಂಭಾವ ಪ್ರದರ್ಶಿಸಿದ ಫಲವಾಗಿ ಕಾತ್ರ್ಯವೀರಾರ್ಜುನನಾಗಿ ಮರ್ಥ್ಯಲೋಕದಲ್ಲಿ ಅವತರಿಸಿತು. 

ನಮ್ಮ ಶರೀರವೇ ದೀಪವಾಗಿದೆ.   ಸತ್ಕರ್ಮಗಳನ್ನು ಮಾಡುತ್ತಾ ಇತರರಿಗೆ ಒಳಿತನ್ನು ಬಯಸಿದಾಗ ಬದುಕೇ ದೀಪಾವಳಿಯಾಗುತ್ತದೆ. ನಮ್ಮ ನಡತೆ, ನಡವಳಿಕೆ ಸಂಸ್ಕಾರ ಅಂಧಕಾರದಲ್ಲಿರುವವರಿಗೆ ದರ್ಶನ ನೀಡುವ ಜ್ಯೋತಿಯಾಗಬೇಕು. ಸಂಜೆಯ ಹೊತ್ತಿನಲ್ಲಿ ದೀಪವನ್ನಿಡುವುದರಿಂದ ಅಂತರಂಗ ಮತ್ತು ಬಹಿರಂಗದ ಅಂಧಕಾರ ಕಳೆಯುತ್ತದೆ. ಇದರ ಜೊತೆ ಶಂಖ, ಜಾಘಂಟೆ ಮೊದಲಾದ ದಶನಾದಗಳ ಶಬ್ದದಿಂದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಬೆಳಕಿನ ಸ್ವರೂಪದಲ್ಲಿರುವ ಭಗವಂತನನ್ನು ಆರಾಧಿಸುವ ಪ್ರಕ್ರಿಯೆಯೇ ದೀಪಾವಳಿ.  ನಮ್ಮ ಶರೀರದೊಳಗೂ ಬೆಳಕಿದೆ, ನಾನಾ ಆರಾಧನೆಗಳ ಮುಖೇನ ಆ ಬೆಳಕನ್ನು ಜಾಗೃತಗೊಳಿಸಿದಾಗ ಶರೀರವು ಬ್ರಹ್ಮ ತೇಜಸ್ಸಿನಿಂದ ತುಂಬಿ ತುಳುಕುತ್ತದೆ.  

ಮನೆಯ ಒಳಗೆ ಮತ್ತು ಹೊರಗೆ ದೀಪಾವಳಿಯ ಪುಣ್ಯ ಕಾಲದಂದು ದೀಪಗಳನ್ನು ಬೆಳಗಲಾಗುತ್ತದೆ. ಇದು ಮನಸ್ಸಿನ ಒಳ ಮತ್ತು ಹೊರಗಿರುವ ಕೊಳಕೆಂಬ ಕತ್ತಲೆ ಕಳೆದು ಜ್ಞಾನವೆಂಬ ಬೆಳಕು ಹರಿಯಲಿ ಎನ್ನುವುದನ್ನು ಸಂಕೇತಿಸುತ್ತದೆ. ಅಷ್ಟವಸುಗಲ್ಲಿ ಅಗ್ನಿ ಶ್ರೇಷ್ಠನಾದರೆ, ಪಿತೃ ದೇವತೆಗಳಲ್ಲಿ ಆದಿತ್ಯ ಶ್ರೇಷ್ಠ. ಆದಿತ್ಯ ಬೆಳಗ್ಗಿನ ಸಮಯದಲ್ಲಿ ಬೆಳಕಾಗಿ ಬೆಳಗಿದರೆ, ಅಗ್ನಿ ಕತ್ತಲೆಯನ್ನು ಕಳೆಯುವ ಜ್ಯೋತಿಯಾಗಿ ಉರಿಯುತ್ತಾನೆ. ಹೋಮದ ಸಂದರ್ಭದಲ್ಲಿ ಅಗ್ನಿಗೆ ಸಮರ್ಪಿಸುವ ವಸ್ತುಗಳು ಧೂಮ ಮಾರ್ಗದಲ್ಲಿ ಉನ್ನತ ಲೋಕಗಳನ್ನು ಪ್ರವೇಶಗೈಯ್ಯುತ್ತದೆ. ಉತ್ತರಾಯಣ ಮತ್ತು ದಕ್ಷಿಣಾಯನಗಳೆಂಬ ಕಾಲ ಮಿತಿಯೂ ಇದಕ್ಕೆ ಸಂಬಂಧಪಟ್ಟಿದೆ.  ಸಾಮಾಜಿಕ ನೆಲೆಗಟ್ಟಿನಲ್ಲಿ ಅಶಕ್ತರಿಗೆ ಮಾಡುವ ಸಹಾಯವು ದೀಪಾವಳಿಯನ್ನು ಪರಿಪೂರ್ಣಗೊಳಿಸುತ್ತದೆ. ಪಟಾಕಿಗಳಿಗೆ ಹಣವನ್ನು ವ್ಯರ್ಥ ಮಾಡುವುದಕ್ಕಿಂತ ಸೇವಾಕಾರ್ಯಗಳಿಗೆ ಅದೇ ಹಣವನ್ನು ವ್ಯಯ ಮಾಡಿದರೆ ದೀಪಾವಳಿ ಅರ್ಥಪೂರ್ಣವಾಗಿ ಆಚರಿಸಲ್ಪಡುತ್ತದೆ.  

 ಹಳ್ಳಿ ಮತ್ತು ಪೇಟೆಗಳಲ್ಲಿ ಆಚರಿಸುವ ದೀಪಾವಳಿಯಲ್ಲಿ ಹಲವು ವ್ಯತ್ಯಾಸಗಳನ್ನು ಕಾಣಬಹುದು. ಹಳ್ಳಿಗಳಲ್ಲಿ ಬೆಳಕನ್ನು ಪ್ರಕೃತಿಯ ಭಾಗವೆಂದು ಪರಿಗಣಿಸಿ ಪ್ರಕೃತಿಗೆ ಹಾನಿಯಾಗದಂತೆ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹಳ್ಳಿಗಳಲ್ಲಿ ದೀಪಾವಳಿಯ ಸಂದರ್ಭ ಎಣ್ಣೆ ಸ್ನಾನವನ್ನು ಮಾಡಲಾಗುತ್ತದೆ. ಇದು ವೈಜ್ಞಾನಿಕವಾಗಿ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಸಾಬೀತಾಗಿದ್ದು ಶಾಸ್ತ್ರಗಳ ಪ್ರಕಾರ ಈ ಪ್ರಕ್ರಿಯೆಯಿಂದ ಶನಿ ದೋಷ ಶಮನವಾಗುತ್ತದೆ. ಹಳ್ಳಿಗಳಲ್ಲಿ ದೀಪಾವಳಿಯ ಸಂದರ್ಭ ಮೇಳದೇವರನ್ನು ಆರಾಧಿಸುವ ಕ್ರಮವಿದೆ. ಇಲ್ಲಿ ಧನಲಾಭವನ್ನು ಕರುಣಿಸುವ ಯಕ್ಷರ ಅಧಿಪತಿ ಕುಬೇರನನ್ನು ಮೇಳದ ದೇವರು ಎಂದು ಸಂಬೋಧಿಸಲಾಗುತ್ತದೆ. ಈ ಸಂದರ್ಭ ಒಂಬತ್ತು ವಿಧದ ಫಲಪುಷ್ಪಗಳಿಂದ ಮಾಲೆಗಳನ್ನು ಮಾಡಲಾಗುತ್ತದೆ. ಲಕ್ಷ್ಮಿಯ ಸಂಕೇತವಾದ ವೀಳ್ಯದೆಲೆ, ಬುದ್ಧಿಕಾರಕವಾದ ಬಾಳೆಹಣ್ಣು, ದೇವಪುಷ್ಪ ಹಿಂಗಾರ, ಕೆಂಪು ಅಡಿಕೆ, ಔಷಧೀಗಿಡವಾದ ಪಚ್ಚೆ ತೆನೆ, ಬುಧಗ್ರಹದ ಸಂಕೇತವಾದ ಉತ್ತರಿಣೀ, ಕಿತ್ತಳೆ ಸೊಪ್ಪು, ಲಿಂಗದ ಹೂವು, ಏಲಕ್ಕಿ ತೆನೆ ಇವುಗಳೆಲ್ಲವೂ ಹಳ್ಳಿಗರು ಹಬ್ಬಗಳಲ್ಲಿ ಉಪಯೋಗಿಸುವ ಪ್ರಾಕೃತಿಕ ಸಂಪತ್ತುಗಳಾಗಿವೆ. 

ಮಣ್ಣಿನ ಹಣತೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿ, ಬಾಳೆ ಎಲೆಯಲ್ಲಿ ಎಲ್ಲಾ ಬಗೆಯ ತಿನಿಸುಗಳನ್ನು ಬಡಿಸಿ ಅದನ್ನು ಗೋವಿಗೆ ಸಮರ್ಪಿಸಿ, ತದ ನಂತರ ಮನೆಯ ಕೆಲಸದಾಳುಗಳಿಗೆ ಅನ್ನದಾನ ಮಾಡಿ ಕೊನೆಗೆ ಆ ಪ್ರಸಾದವನ್ನು ಮನೆಯವರು ಸೇವಿಸುವುದು ಹಳ್ಳಿಯ ಸಂಪ್ರದಾಯ. ಇದು ಸಹಬಾಳ್ವೆ, ಸಹಿಷ್ಣುತೆ ಮತ್ತು ತಾರತಮ್ಯವಿಲ್ಲದ ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಹಳ್ಳಿಗಳಲ್ಲಿ ಗೋಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ಎಲ್ಲಾ ಪುಣ್ಯ ಕ್ಷೇತ್ರಗಳಲ್ಲೂ ಗೋವಿನ ಉಲ್ಲೇಖ ಇದ್ದೇ ಇದೆ. ಶಾಸ್ತ್ರೋಕ್ತವಾಗಿ ಗೋವಿನ ನಾಲ್ಕು ಕಾಲುಗಳಲ್ಲಿ ವೇದಗಳು ನೆಲೆಸಿದ್ದರೆ, ಗೋವಿನ ಸಂಪೂರ್ಣ ದೇಹದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ. ಸೆಗಣಿ ಸಾರಿಸಿದ ನೆಲದಲ್ಲಿ ಮಲಗಿದಾಗ ಸಕಾರಾತ್ಮಕ ಬದಲಾವಣೆಯ ಜೊತೆಗೆ ಶಾರೀರಿಕ ಶುದ್ಧಿಯಾಗುವುದು ಸಾಬೀತಾಗಿದೆ. ತ್ರಿವಿಧ ಬಗೆಯ ಎಣ್ಣೆಯಿಂದ ದೀಪಗಳನ್ನು ಹಚ್ಚಲಾಗುತ್ತದೆ. ತುಪ್ಪದಿಂದ ದೀಪ ಉರಿದಾಗ ಶುದ್ಧ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಹರಳೆಣ್ಣೆಯ ದೀಪವು ದೇಹಕ್ಕೆ ತಂಪನ್ನು ನೀಡುತ್ತದೆ. ಕಡಲೇಕಾಯಿ ಮತ್ತು ಎಳ್ಳೆಣ್ಣೆಯು ಔಷಧೀ ಗುಣಗಳನ್ನು ಹೊಂದಿದೆ. 

ಪ್ರಸ್ತುತ ದೀಪಾವಳಿ ಹಬ್ಬವನ್ನು ಪೇಟೆ ಭಾಗಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಹೇಳುವುದಕ್ಕಷ್ಟೇ ಸೀಮಿತವಾಗಿಸುತ್ತಿರುವುದು ವಿಷಾದಕರ. ಹಳ್ಳಿಗಳಲ್ಲಿ ರೈತರ ಸಲಕರಣೆಗಳಿಗೆ ದೀಪಾವಳಿಯ ಸಂದರ್ಭ ಪೂಜೆ ಸಲ್ಲಿಸಲಾಗುತ್ತದೆ. ಇದು ನಿರ್ಜೀವ ವಸ್ತುಗಳಲ್ಲೂ ದೈವೀಕ ಭಾವವನ್ನು ಕಂಡಿರುವ ಹಳ್ಳಿ ಜನರ ಶುದ್ಧ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಸನಾತನ ಧರ್ಮದಲ್ಲಿ ಹಬ್ಬಗಳು ವಿವಿಧ ಮನಸ್ಥಿತಿಗಳನ್ನು ಒಟ್ಟುಗೂಡಿಸುವ ಮಹತ್ಕಾರ್ಯವನ್ನು ಮಾಡುತ್ತದೆ ಎನ್ನುವ ಅಂಶಕ್ಕೆ ಬೆಳಕು ಬೀರುವ ಅನಿವಾರ್ಯತೆ ಹೆಚ್ಚಿದೆ. ಬುದ್ಧಿ ಬೆಳಗಿದಾಗ ಮನೆ ಬೆಳಗುತ್ತದೆ ಎಂಬ ಪರಮ ಸತ್ಯವನ್ನು ಅರಿತಾಗ ದೀಪಾವಳಿಯ ಆಚರಣೆಗೆ ನಿಜವಾದ ಅರ್ಥ ದೊರಕುತ್ತದೆ.