You are currently viewing ಧಾರ್ಮಿಕ ಮತ್ತು ರಾಜಕೀಯ ರಂಗದಲ್ಲಿ ನಾಯಕ ಎನಿಸುವವನಿಗೆ ಬೇಕಾದ ಅವಶ್ಯಕ ಅರ್ಹತೆಗಳ ಬಗ್ಗೆ ಅವಧೂತರ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಧಾರ್ಮಿಕ ಮತ್ತು ರಾಜಕೀಯ ರಂಗದಲ್ಲಿ ನಾಯಕ ಎನಿಸುವವನಿಗೆ ಬೇಕಾದ ಅವಶ್ಯಕ ಅರ್ಹತೆಗಳ ಬಗ್ಗೆ ಅವಧೂತರ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಒಂದು ಸಮೂಹವನ್ನು ಸರಿಯಾದ ಮಾರ್ಗದಲ್ಲಿ ದಿಕ್ಸೂಚಿಯಂತೆ ಮುನ್ನೆಡೆಸುವವನೇ ನಿಜವಾದ ನಾಯಕ. ನಾಯಕತ್ವವನ್ನು ಧರ್ಮ, ರಾಜಕೀಯ ಮತ್ತು ಸಾಮಾಜಿಕವಾಗಿ ವಿಭಜಿಸಬಹುದು. ಧರ್ಮದ ದಾರಿಯನ್ನು ತೋರುವವನು ಮೊದಲು ಧರ್ಮದ ತಳಹದಿಯನ್ನು ಅರ್ಥೈಸಿಕೊಳ್ಳಬೇಕು. ದಯೆಯೇ ಧರ್ಮದ ತಳಹದಿ. ಧಾರ್ಮಿಕ ನಾಯಕತ್ವ ವಹಿಸುವವನಿಗೆ ಸತ್ಯ ನಿಷ್ಠೆ, ಸಹನೆ, ಮನುಷ್ಯತ್ವದಂತಹ ತತ್ವಾದರ್ಶಗಳ ಅರಿವಿರಬೇಕು. ಅಪೇಕ್ಷೆ ಇಲ್ಲದೆ ನೈಷ್ಕರ್ಮ ಸಿದ್ದಿಯನ್ನು ಸಂಪಾದಿಸಿದರೆ ಧರ್ಮ ಪಥದಲ್ಲಿ ನಾವು ನಡೆಯುತ್ತಿದ್ದೇವೆ ಎಂದರ್ಥ. ಜೀವನದಲ್ಲಿ ತಂದೆ ತಾಯಿ ಧರ್ಮ ಮಾರ್ಗದ ಆರಂಭಿಕ ಜ್ಞಾನ ನೀಡುತ್ತಾರೆ. ಮುಂದೆ ಅನುಭವ ಮನುಷ್ಯನಿಗೆ ಧರ್ಮದ ಪಾಠ ಕಲಿಸುತ್ತದೆ. ಗುರುಗಳು ನಾಗರೀಕತೆಯ ಅರಿವು ಮೂಡಿಸಿದರೆ ಸಮಾಜ ಮಾನವನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಭೂಮಿಯಲ್ಲಿ ಏಕೆ ಮತ್ತು ಹೇಗೆ ಬದುಕಬೇಕು ಎಂಬ ಜೀವನ ಪಾಠವನ್ನು ಮಠ ಮಂದಿರಗಳು ತಿಳಿಸಿಕೊಡುತ್ತದೆ. ಮಠ ಎಂದರೆ ಮನಸ್ಸಿನ ಹಠವನ್ನು ನಿಯಂತ್ರಿಸುವ ಜಾಗ. ಮಾನವೀಯ ಪ್ರಜ್ಞೆಯನ್ನು ಹೊಂದಿದ ಪ್ರಜೆಯ ನಿರ್ಮಾಣ ಧಾರ್ಮಿಕ ಕೇಂದ್ರಗಳಿಂದ ಸಾಧ್ಯ. ಸಮಾನತೆ ಹಾಗೂ ಮನುಷ್ಯತ್ವ ನಿಜಕ್ಕೂ ಧರ್ಮದ ಮೂಲ. ಈ ಪಥದಲ್ಲಿ ನಡೆದರೆ ಮನುಷ್ಯ ಧರ್ಮಶೀಲನಾಗಿದ್ದಾನೆ ಎಂದರ್ಥ.

ಧಾರ್ಮಿಕ ಗುರುವಾಗ ಬಯಸುವವನು ಮೊದಲು ದಯೆಯ ಮೂಲವನ್ನು ಅರಿತಿರಬೇಕು. ಸತ್ಯನಿಷ್ಠೆ ಮತ್ತು ಪಾರದರ್ಶಕ ವ್ಯಕ್ತಿತ್ವ ಧರ್ಮಗುರುವಿಗಿರಬೇಕಾದ ಮುಖ್ಯ ಲಕ್ಷಣ. ಮಾತು ಮತ್ತು ಕೃತಿಯನ್ನು ಒಂದೇ ತೆರನಾಗಿ ಕಂಡುಕೊಳ್ಳುವವನು ನಿಜವಾದ ಧಾರ್ಮಿಕ ನಾಯಕ. ಒಬ್ಬ ವ್ಯಕ್ತಿಗೆ ನಡವಳಿಕೆ ಮುಖ್ಯ ಅದರಲ್ಲೂ ಧಾರ್ಮಿಕ ನಾಯಕತ್ವ ವಹಿಸಿದ ವ್ಯಕ್ತಿಯ ನಡವಳಿಕೆ ಇತರರ ಬದುಕಿಗೆ ಬೆಳಕು ಚೆಲ್ಲುವಂತಿರಬೇಕು. ಶಾಸ್ತ್ರಾಧ್ಯಯನ ಒಬ್ಬ ಧರ್ಮಗುರು ಮಾಡಬೇಕಾದ ಮೊದಲ ಕೆಲಸ. ಶೈವ ತತ್ವದ ಸಾರಥ್ಯ ವಹಿಸಿದವನು ಲಿಂಗಪೂಜೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆಯ ರಹಸ್ಯ, ಆಚರಣಾ ಪದ್ದತಿ ಮೊದಲಾದವುಗಳ ಬಗ್ಗೆ ಉತ್ತಮ ಜ್ಞಾನವಿರಬೇಕು. ಶೈವ ಸಿದ್ದಾಂತ ಪ್ರಾಣಲಿಂಗದಿಂದ ಪ್ರಸವ ಲಿಂಗದ ನಡುವಣ ಬಹುದೊಡ್ಡ ಆಧ್ಯಾತ್ಮವಾಗಿದ್ದು, ಅದನ್ನು ಅರ್ಥೈಸಿಕೊಳ್ಳಬೇಕು. ಆತ್ಮಸಾಕ್ಷಾತ್ಕಾರದ ಅನುಭೂತಿಯನ್ನು ಪಡೆಯುವುದೇ ಆತ್ಮಜ್ಞಾನ. ಇದು ಕ್ರಿಶ್ಚಿಯನ್ ಧರ್ಮದಲ್ಲೂ ಉಲ್ಲೇಖಗೊಂಡಿದೆ. ಅದ್ವೈತದಲ್ಲೂ ಇದೇ ತಿರುಳಿದೆ. ಶಾಕ್ತಾರಾಧನೆ ಎಂದರೆ ಶಕ್ತಿ ಪೂಜೆ. ಅಕ್ಷರ ಬ್ರಹ್ಮದಿಂದ ಶಬ್ದವನ್ನು ಉಚ್ಚರಿಸಿ ಆರಾಧಿಸುವ ಕ್ರಿಯೆ. ಮಂತ್ರೋಚ್ಛಾರಣೆ ಇಲ್ಲಿ ಬಹು ಮುಖ್ಯ ಅಂಶ. ವೈಷ್ಣವೀ ಸಂಪ್ರದಾಯದಲ್ಲಿ ವಿಷ್ಣುವನ್ನು ಅಣು ರೇಣು ತೃಣ ಕಾಷ್ಟದಲ್ಲೂ ಕಾಣಬಹುದು. ಕನಕದಾಸರು ಇದನ್ನೇ ನೀ ಮಾಯೆಯೊಳಗೋ ಕೃಷ್ಣ ಎಂದಿರುವುದು. ಗಾನಪತ್ಯದಲ್ಲಿ ಗಣಪತಿ ಆರಾಧನೆ. ಇಲ್ಲಿ ಗಣಪತಿ ಎಂದರೆ ಪಂಚಭೂತಗಳ ಸಾರಾಂಶ. ಪ್ರಾಣಿ, ಪ್ರಕೃತಿ ಮತ್ತು ಮನುಷ್ಯನ ಸಮ್ಮಿಲನದ ಅಂಶವೇ ಗಣಪತಿ. ಪ್ರಕೃತಿ ಮತ್ತು ಪಂಚಭೂತಗಳ ಶಕ್ತಿಯನ್ನು ನಾವು ಗಣಪತಿ ಹಬ್ಬದಲ್ಲಿ ಕಾಣಬಹುದು. ಸನಾತನ ಧರ್ಮದ ನಾಲ್ಕು ಪರಂಪರೆಯವರಿಗೂ ಈ ಮೂಲ ತಿರುಳು ತಿಳಿದಿರಬೇಕು. ಮನೆಯೂ ಸಣ್ಣ ಮಟ್ಟದ ಮಠವಿದ್ದಂತೆ, ಆದರೆ ಮನೆ ಮೋಹದ ವಶವಾಗಿರುತ್ತದೆ. ಆಯಾಯ ಪಂಗಡಕ್ಕನುಗುಣವಾಗಿ ಅಲ್ಲಿನ ಮಠಾಧಿಪತಿ ತಂದೆಯ ಸ್ಥಾನದಲ್ಲಿರುತ್ತಾನೆ. ಧರ್ಮ ಸಂಸ್ಥಾಪನೆ ಇಲ್ಲಿ ಒಬ್ಬ ಧಾರ್ಮಿಕ ನಾಯಕ ನಿರ್ವಹಿಸಬೇಕಾದ ಮುಖ್ಯ ಕೆಲಸ.

ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವವನಿಗೆ ಇಸ್ಲಾಂ ಮತದ ಮೂಲ ಆಶಯದ ಅರಿವಿರಬೇಕು. ನಿರ್ಗುಣ, ನಿರಾಕಾರ ಪರಮ ಸತ್ಯದ ಪೂರ್ಣತೆಯ ಬೆಳಕನ್ನು ಆರಾಧನೆ ಮಾಡುವುದು ಇಸ್ಲಾಂ ಧರ್ಮ. ಪರಮ ಪ್ರಭುವಿಗೆ ಮುಸ್ಲಿಮರು ಮಾಡುವ ನಮಸ್ಕಾರ ಶರಣಾಗತಿಯ ಸಂಕೇತ. ಬೆಳಕು ಮತ್ತು ಶಕ್ತಿಯ ಸಂಕೇತವಾಗಿರುವ ಚಂದ್ರ ಮತ್ತು ನಕ್ಷತ್ರದ ಆರಾಧನೆಯನ್ನು ಇಸ್ಲಾಂ ಮತದಲ್ಲಿ ಕಾಣಬಹುದು. ಇದು ಪ್ರಕೃತಿಗೂ ಸಂಬಂಧಪಟ್ಟಿದೆ. ಸಮಾನತೆಯ ತತ್ವವನ್ನು ಇಸ್ಲಾಂ ಧರ್ಮ ಎತ್ತಿ ಹಿಡಿಯುತ್ತದೆ. ಪ್ರಾರ್ಥನೆಯನ್ನು ಸಮೂಹವಾಗಿ ಅಲ್ಲಾಹುವಿಗೆ ಅರ್ಪಿಸುವ ಮೂಲಕ ಏಕತೆಯ ಭಾವವನ್ನು ಇಸ್ಲಾಂ ಧರ್ಮ ಸಾಬೀತುಪಡಿಸುತ್ತದೆ. ಗಲಾಟೆಯನ್ನು ಪ್ರತಿಪಾದಿಸುವುದು ಇಸ್ಲಾಂ ಅಲ್ಲ. ಪೈಗಂಬರರ ಧರ್ಮದ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಇಸ್ಲಾಂ ಮತ ಪ್ರಚಾರಕರು ತನ್ನ ಅನುಯಾಯಿಗಳಿಗೆ ಪೈಗಂಬರರು ತೋರಿದ ಸತ್ಯದ ದಾರಿಯನ್ನು ತೋರಬೇಕು. ಕ್ರೆಸ್ತ ಧರ್ಮದ ಮೂಲ ತತ್ವವೇ ಕ್ಷಮೆ. ಏಸು ಕ್ರಿಸ್ತನಿಗೆ ಅಪೂರ್ವ ಶಕ್ತಿಗಳಿದ್ದರೂ ಆತ ಅದನ್ನು ತನಗಾಗಿ ಉಪಯೋಗಿಸಲಿಲ್ಲ. ತನ್ನನ್ನು ಶಿಲುಬೆಗೇರಿಸುವ ಸಂದರ್ಭದಲ್ಲೂ ಕ್ಷಮೆಯ ಮಹಾಪಾಠ ಮಾಡಿದ ಮಾಹಾಮಹಿಮ ಜೀಸಸ್. ಹಿಂದೂ ಧರ್ಮದ ಮೂಲ ತತ್ವ ಸಹಿಷ್ಣುತೆ, ಇಸ್ಲಾಂ ಧರ್ಮದ ಮೂಲತತ್ವ ಸಮಾನತೆ ಮತ್ತು ಕ್ರೈಸ್ತ ಧರ್ಮದ ಮೂಲತತ್ವ ಕ್ಷಮಾಗುಣ. ನಮ್ಮ ಧರ್ಮ ಶ್ರೇಷ್ಠ ಎಂದು ಸಾರುವ ಅವಶ್ಯಕತೆಯೇ ಇಲ್ಲ. ಭಗವಂತ ಒಂದೊಂದು ರೂಪದಲ್ಲಿ ಕಾಲಕ್ಕೆ ತಕ್ಕಂತೆ ಅವತರಿಸಿ ಲೋಕವನ್ನುದ್ದರಿಸಿದ್ದಾನಷ್ಟೇ. ದಯೆಯ ಮೂಲವು ಬೇರೆ ಬೇರೆ ತತ್ವಗಳಾಗಿ ಧರ್ಮದ ರೂಪವನ್ನು ಪಡೆಯಿತು. ಇದನ್ನು ಧರ್ಮದ ನಾಯಕರು ಕಂಡು ಕೊಂಡಾಗ ಧರ್ಮ ಕ್ಷೋಭೆ ಶಮನವಾಗುತ್ತದೆ. ಧರ್ಮೋದ್ಧಾರದ ದೊಡ್ಡ ಜವಾಬ್ದಾರಿ ಧರ್ಮಗುರುಗಳ ಮೇಲಿದೆ. ಮತಕ್ಕೆ ರಾಜಕೀಯ ಅಂಟಬಾರದು. ರಾಜಕೀಯ ಧರ್ಮದ ತಳಹದಿಯಲ್ಲಿ ನಡೆಯಬೇಕು. ಸಮಾಜ ಸುಧಾರಕರು ದೇವರನ್ನು ನಂಬುವುದಕ್ಕಿಂತ ದೇವರಂತೆ ಬದುಕುವ ಮಾರ್ಗವನ್ನು ನಂಬಿದ್ದರು. ಪ್ರಕೃತಿಯಲ್ಲಿ ನಮ್ಮನ್ನು ನಾವು ತಿಳಿಯುವುದು ಮತ್ತು ಅನುಭವದಿಂದ ಜ್ಞಾನ ಪಡೆಯುವುದು ಸಮಾಜ ಸುಧಾರಕ ಮಾರ್ಗ. ಅವರು ಸಾಮಾನ್ಯರಂತೆಯೇ ಬದುಕಿ ಜೀವನ ಪಾಠವನ್ನು ಹೇಳಿ ಹೋಗುತ್ತಾರೆ. ಬದುಕನ್ನೇ ಪ್ರಯೋಗ ಶಾಲೆಯಾಗಿಸಿ ಮಾದರಿಯಾಗುವವನು ಸಮಾಜ ಸುಧಾರಕ. ಸರ್ವವೂ ಸಮೀಕರಣಗೊಂಡದ್ದು ಸಮಾಜದಲ್ಲಿ. ಭಾರತದಲ್ಲಿ ಈ ಮೂರನ್ನೂ ಸಮೀಕರಣಗೊಳಿಸುವುದು ಸಂವಿಧಾನ. ಸರ್ವಕ್ಕೂ ಮೂಲಭೂತ ಹಕ್ಕನ್ನು ಒದಗಿಸುವ ಮಹಾತ್ಕಾರ್ಯ ಮಾಡುವ ಧರ್ಮ ಗ್ರಂಥವೇ ಭಾರತದ ಸಂವಿಧಾನ.

ರಾಜಕೀಯ ನಾಯಕನಾಗಬಯಸುವವನು ಮೊದಲು ತನ್ನ ಪಕ್ಷದ ಸಿದ್ಧಾಂತವನ್ನು ಸರಿಯಾಗಿ ಅಭ್ಯಸಿಸಿರಬೇಕು. ಪ್ರಸ್ತುತ ರಾಜಕೀಯದಲ್ಲಿ ಸತ್ಯ ನಿಷ್ಠೆಯನ್ನು ಪಾಲಿಸುವವರು ಬಹು ವಿರಳ. ಹಿಂದಿನ ಕಾಲದಲ್ಲಿ ರಾಜನಾಗಬಯಸುವವನು 64 ವಿದ್ಯೆಗಳಲ್ಲಿ ಪಾರಂಗತನಾಗಿರಬೇಕಿತ್ತು. ಗುರು ಮತ್ತು ಗುರಿಯ ಸ್ಪಷ್ಟತೆ ರಾಜರಿಗಿತ್ತು. ಇದರ ಜೊತೆಗೆ ಬಹುಮುಖ್ಯವಾಗಿ ಜನ ಸಾಮಾನ್ಯರ ಜೀವನ ಶೈಲಿಯನ್ನು ರಾಜನಾಗುವವನು ಅರ್ಥೈಸಿಕೊಳ್ಳಬೇಕಿತ್ತು. ಸದ್ಯ ಇವೆಲ್ಲವನ್ನೂ ಕಾಣಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾದನೀಯ. ಕೆಂಪೇಗೌಡರನ್ನು ರಾಜಧರ್ಮ ಪರಿಪಾಲನೆಯಲ್ಲಿ ಮಾದರಿ ನಾಯಕನಾಗಿ ಹೆಸರಿಸಬಹುದು. ಕೆಂಪೇಗೌಡರ ಕಲ್ಪನೆ ಮಾತ್ರದಿಂದಲೇ ಬೆಂಗಳೂರಿನಂತಹ ಮಹಾನಗರ ಸೃಷ್ಟಿಯಾಗಿದೆ. ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನಷ್ಟೇ ರಾಜಕೀಯ ನಾಯಕನಾಗುವ ಯೋಗ್ಯತೆಯಾಗಿ ಅಳೆಯುವುದು ತಪ್ಪು. ಸ್ವಾತಂತ್ರ್ಯಾ ನಂತರ ಭಾರತ ದೇಶದಲ್ಲಿ ಸಂಚಲನ ಸೃಷ್ಠಿಸಿದ ಮೂರು ಪಕ್ಷಗಳೂ ಅದರದ್ದೇ ಆದ ತತ್ವಾದರ್ಶಗಳನ್ನು ಹೊಂದಿದೆ. ಭಾರತೀಯ ಜನತಾ ಪಕ್ಷ ಸೇರಲು ಬಯಸುವ ಯುವ ಅಭ್ಯರ್ಥಿಗಳು ಮೊದಲು ಆ ಪಕ್ಷದ ಮೂಲವಾದ ತ್ಯಾಗ ಮನೋಭಾವದ ಬಗ್ಗೆ ತಿಳಿದಿರಬೇಕು. ಜನಸಂಘವೊಂದು ದೇಶದ ಚುಕ್ಕಾಣಿ ಹಿಡಿಯುವುದರ ಹಿಂದೆ ಅವೆಷ್ಟೋ ಕಾರ್ಯಕರ್ತರ ತ್ಯಾಗ ಬಲಿದಾನಗಳ ಶ್ರಮವಿದೆ. ಕಾಂಗ್ರೆಸ್ ಪಕ್ಷದ ಹಸ್ತದ ಲಾಂಛನವು ಅಭಯವನ್ನು ಪ್ರತಿನಿಧಿಸುತ್ತದೆ. ಕಾಂಗ್ರೆಸ್ ಪಕ್ಷ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಹಿಸಿದ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಇನ್ನು ಪ್ರಾದೇಶಿಕ ಪಕ್ಷವೊಂದು ಭಾರತದ ರಾಜಕೀಯ ಚರಿತ್ರೆಯಲ್ಲೇ ದೊಡ್ಡ ಹೆಸರು ಮಾಡುತ್ತದೆ ಎಂದು ಸಾಧಿಸಿ ತೋರಿಸಿದ ಖ್ಯಾತಿ ಜೆಡಿಎಸ್ ಪಾಲಾಗುತ್ತದೆ. ಈ ಎಲ್ಲಾ ಪಕ್ಷಗಳ ಲಾಂಛನಗಳು ಅದರ ತತ್ವಾದರ್ಶ ಮತ್ತು ಕಾರ್ಯ ವೈಖರಿಯನ್ನು ಪ್ರತಿನಿಧಿಸುತ್ತದೆ. ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಯಾರೇ ಆಗಲಿ ಮೊದಲು ತನ್ನ ಪಕ್ಷದ ಮೂಲ ಸಿದ್ದಾಂತ ಮತ್ತು ಪಕ್ಷನಿಷ್ಠೆಯನ್ನು ಪಾಲಿಸುವುದು ಪ್ರಸ್ತುತ ಅತ್ಯವಶ್ಯಕ