You are currently viewing ನವರಾತ್ರಿನ ಉಪಾಸನೆ, ಅನುಷ್ಠಾನ ಮತ್ತು ಶ್ರೀ ಚಕ್ರ ಪೂಜೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ನವರಾತ್ರಿನ ಉಪಾಸನೆ, ಅನುಷ್ಠಾನ ಮತ್ತು ಶ್ರೀ ಚಕ್ರ ಪೂಜೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಸನಾತನ ಧರ್ಮದಲ್ಲಿ ನವರಾತ್ರಿ ಮತ್ತು ಶಿವರಾತ್ರಿಗೆ ವಿಶೇಷವಾದ ಪ್ರಾಧಾನ್ಯತೆ ಇದೆ. ಸರ್ವ ವ್ಯಾಪಿಯಾದ ಬೆಳಕಿನ ಆದಿ ಮತ್ತು ಅಂತ್ಯವನ್ನು ಹುಡುಕುವುದು ಕಷ್ಟ ಸಾಧ್ಯ. ಆ ಬೆಳಕಿನ ಪ್ರತಿಫಲನವೇ ಶಕ್ತಿ. ಪಂಚಭೂತಗಳಲ್ಲಿ ಶಕ್ತಿ ನೆಲೆಯಾಗಿರುವುದನ್ನು ಗಮನಿಸಬಹುದು. ಶಿವ ಮತ್ತು ಶಕ್ತಿ ಪಂಚತತ್ವಗಳ ಪ್ರತಿನಿಧಿಗಳಾಗಿದ್ದಾರೆ. ಬೆಳಕು ಮತ್ತು ಶಕ್ತಿಯ ಸಮ್ಮಿಲನವನ್ನು ಸೃಷ್ಠಿ ಎನ್ನಲಾಗುತ್ತದೆ. ಜಗತ್ತಿನ ಜನರ ಎಲ್ಲಾ ಅಭಿಲಾಶೆಗಳನ್ನು ಈಡೇರಿಸುವ ಕಾರಣ ಶಿವನನ್ನು ಕಾಮಕಾಮೇಶ್ವರ ಮತ್ತು ಶಕ್ತಿಯನ್ನು ಕಾಮಾಕ್ಷಿ ಎಂದು ಪೂಜಿಸಲಾಗುತ್ತದೆ. ಶಕ್ತಿಯನ್ನು 9 ದಿನಗಳ ಕಾಲ ಆರಾಧಿಸುವ ಪ್ರಕ್ರಿಯೆಯೇ ನವರಾತ್ರಿ. ನವರಂಧ್ರಗಳಲ್ಲೂ ನವಶಕ್ತಿಯ ನೆಲೆಯಿದೆ. ದೇಹದಲ್ಲಿ ಪ್ರಾಣಶಕ್ತಿಯಾಗಿ ನೆಲೆಸಿರುವ ದೇವಿಯನ್ನು ದುರ್ಗಾರೂಪದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ನವರಂಧ್ರಗಳಲ್ಲಿನ ಪ್ರಾಣಶಕ್ತಿ, ದೇವಿಯ ಆರಾಧನೆಯ ಮುಖೇನ ಬ್ರಹ್ಮರಂಧ್ರ ತಲುಪಿದಾಗ ಮೋಕ್ಷದ ಬಾಗಿಲು ತೆರೆದುಕೊಳ್ಳುತ್ತದೆ. ಇದು ಜನನ ಮರಣದಿಂದ ನಮ್ಮನ್ನು ಆಚೆಗೆ ಕರೆದೊಯ್ಯುತ್ತದೆ. ಲೋಕಗಳ ಉನ್ನತಿಗೆ ಅನುಗುಣವಾಗಿ ಜ್ಞಾನ ಪ್ರಾಪ್ತವಾಗುತ್ತದೆ. ರಕ್ತದಿಂದ ಕೂಡಿದ ಈ ಶರೀರವು ಪ್ರಕೃತಿಯ ಸ್ವರೂಪವಾಗಿದೆ. ಜೀವಶಕ್ತಿಯನ್ನು ಕುಂಕುಮದ ಮೂಲಕ ಧಾರೆಯೆರೆಯುವ ಪ್ರಕ್ರಿಯೆಯೇ ಕುಂಕುಮಾರ್ಚನೆ ಎನಿಸಿಕೊಂಡಿದೆ

ನಮ್ಮಲ್ಲಿನ ಬುದ್ದಿಯಲ್ಲಿ ಶಕ್ತಿ ಸಂಚಯವಾದರೆ ವಿವೇಕ ಉತ್ಪತ್ತಿಯಾಗುತ್ತದೆ. ಅದೇ ರೀತಿ ನಮ್ಮಲ್ಲಿನ ಅಹಂಕಾರದ ಸೇರುವಿಕೆಯಿಂದ ಜ್ಞಾನ ಅಜ್ಞಾನವಾಗುತ್ತದೆ ಮತ್ತು ಧರ್ಮ ಅಧರ್ಮವಾಗುತ್ತದೆ. ಮನುಷ್ಯನಲ್ಲಿ ಒಂದೊಂದು ಆಸೆಗಳು ಉತ್ಪತ್ತಿಯಾದಾಗಲೂ ಅವನಲ್ಲಿ ದುರಾಲೋಚನೆಗಳು ರಾಶಿಯಾಗಿ ಅವನು ದುರಹಂಕಾರಿಯಾಗುತ್ತಾನೆ. ಮಾನವನ ಹೊರಗಿರುವ ಎಲ್ಲ ಅಸುರರು ತನ್ನೊಳಗೆ ಸೇರಿದಾಗ ಮನುಷ್ಯ ವಿವೇಕಿಯಾಗಿದ್ದರೂ ಅವಿವೇಕಿಯಾದ ಕೆಲಸಗಳನ್ನು ಮಾಡುತ್ತಾನೆ. ಸೃಷ್ಟಿಯಲ್ಲಿ ಅಸುರರ ಸಾನಿಧ್ಯದಿಂದ ಸೃಷ್ಟಿ ಇಡೀ ಅಂಧಕಾರದಲ್ಲಿ ತುಂಬಿತ್ತು. ಈ ಕತ್ತಲೆಯನ್ನು ಹೋಗಲಾಡಿಸಲು ತಾಕತ್ತಿರುವ ಬೆಳಕನ್ನು ದುರ್ಗೆ ಎನ್ನುತ್ತೇವೆ. ಹಾಗೆಯೇ ಹೊರಗಿರುವ ಎಲ್ಲ ಅಸುರರನ್ನು ದುರ್ಗೆ ನಾಶ ಮಾಡಿರುವುದಕ್ಕಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ದೇವಿಯ ಅನುಗ್ರಹ ನಮ್ಮ ಮೇಲಾದಾಗ ಅಥವಾ ನಮ್ಮ ನವರಂಧ್ರಗಳ ಜಾಗಗಳಲ್ಲಿ ಆ ಚೈತನ್ಯ ಮತ್ತೆ ಬೆಳಗಿದಾಗ ನಮ್ಮ ನವರಂಧ್ರಗಳು ಸಕ್ರಿಯವಾಗಿ ಕೆಲಸ ಮಾಡಲು ಶುರುವಾಗುತ್ತದೆ. ಇದರಲ್ಲಿ ಹತ್ತನೇ ರಂಧ್ರವೇ ಬ್ರಹ್ಮರಂಧ್ರ, ಅದು ಜಾಗೃತವಾದ ದಿನವೇ ವಿಜಯದಶಮಿ. ನಮ್ಮ ದೇಹದೊಳಗೆ ಅಂದರೆ ನವರಂಧ್ರಗಳಲ್ಲಿ ಕತ್ತಲೆ ಆವರಿಸಿದಾಗ ಮುಸುಕಿನ ಮೊಬ್ಬಿರುವಾಗ ಮಂತ್ರಗಳ ಸಹಾಯದೊಂದಿಗೆ ಹೊರಗೆ ಹೋಗುವ ದಾರಿಯೇ ದುರ್ಗಾ ಸಪ್ತಶತಿ. ಈ ಮಂತ್ರಗಳಿಗೆ ಮನಸ್ಸನ್ನು ಲಯ ಮಾಡುವ ಶಕ್ತಿ ಇವೆ. ಇದರೊಂದಿಗೆ ಇನ್ನು ಹಲವು ಸ್ತೋತ್ರಗಳು ಮನಸ್ಸಿನ ಶಾಂತತೆಗೆ ಸಹಕಾರಿಯಾಗಿದೆ. ಇವುಗಳನ್ನು ಪಾರಾಯಣ ಮಾಡುವುದರಿಂದ ನಮ್ಮ ದೇಹ ಹಾಗೂ ಮನಸ್ಸು ಶುದ್ದಿಯಾಗುತ್ತವೆ.

ಜಗತ್ತಿನಲ್ಲಿ ವ್ಯಾಪಿಸಿರುವ ಸೂರ್ಯನ ಮೂಲಕ ಪ್ರಪಂಚಕ್ಕೆ ಬಂದ ಶಕ್ತಿಯನ್ನು ವಾಯುವಿನ ಸಹಾಯದೊಂದಿಗೆ ನಮ್ಮ ಹೃದಯಕ್ಕೆ ಕೊಟ್ಟು ಅಲ್ಲಿಂದ ರಕ್ತಕ್ಕೆ ಸೇರಿಸಿ ಇಡೀ ದೇಹಕ್ಕೆ ಸಂಚಾರ ಮಾಡಿಸುವ ವಿದ್ಯೆಯೇ ಪ್ರಾಣಾಯಾಮ. ಈ ಪ್ರಾಣಾಯಾಮಕ್ಕಿರುವ ಪೋಷಕ ವ್ಯವಸ್ಥೆಯೇ ವ್ಯಾಯಾಮ. ಸಹಸ್ರನಾಮವನ್ನು ಹೇಳುವುದರಿಂದ ನಮ್ಮ ದೇಹದಲ್ಲಿರುವ ಸಹಸ್ರ ಚಕ್ರಗಳು ಸಕ್ರಿಯವಾಗುತ್ತವೆ. ಹಾಗೆಯೇ ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ನಮ್ಮ ದೇಹಕ್ಕೆ ವಿಶ್ರಾಂತಿಯನ್ನು ಕೊಟ್ಟು ಪ್ರಾಣ ಶಕ್ತಿಯನ್ನು ಜಾಸ್ತಿ ಮಾಡಲು ಸಾಧ್ಯವಾಗುತ್ತದೆ. ಉಪವಾಸ ಮಾಡುವುದರಿಂದ ಆರೋಗ್ಯದ ಶುದ್ಧೀಕರಣದ ಜೊತೆಗೆ ನಮ್ಮೊಳಗಿರುವ ಚೈತನ್ಯವನ್ನು ಬೆಳೆಸಲು ಸಾಧ್ಯವಾಗುತ್ತದೆ. ಇವೆಲ್ಲವನ್ನೂ ಅನುಷ್ಠಾನ ಮಾಡುವುದರಿಂದ ಮಾನಸಿಕ ಶರೀರ, ದೈಹಿಕ ಶರೀರ ಹಾಗೂ ಒಳಗಿರುವ ಕಾರಣ ಶರೀರ ಮತ್ತೆ ಪ್ರಜ್ವಲಿಸಲು ಶುರುವಾಗುತ್ತದೆ.
ಪ್ರಸ್ತುತ ನವರಾತ್ರಿಯನ್ನು ಆಚರಣೆಗೆ ಸೀಮಿತಗೊಳಿಸಲಾಗುತ್ತಿದೆಯೇ ಹೊರತು ಅದರ ಅರ್ಥವನ್ನು ಅರಿಯುವ ಪ್ರಯತ್ನವಾಗುತ್ತಿಲ್ಲ. ಶ್ರೀ ಯಂತ್ರಕ್ಕೆ ಕುಂಕುಮ ಸಮರ್ಪಿಸುವುದರಿಂದ ನಮ್ಮ ದೇಹವೆಂಬ ಶ್ರೀ ಚಕ್ರಕ್ಕೆ ಚೈತನ್ಯ ದೊರೆಯುತ್ತದೆ. ದೇವರಿಗೆ ಸಮರ್ಪಿಸುವ ಪ್ರತಿಯೊಂದು ಪೂಜೆಯೂ ಒಬ್ಬ ವ್ಯಕ್ತಿ ತನಗೆ ಸಕಲವನ್ನು ಕರುಣಿಸಿದ ಶಕ್ತಿಗೆ ಸಲ್ಲಿಸುವ ಕೃತಜ್ಞತೆಯಾಗಿರುತ್ತದೆ ಎನ್ನುವುದನ್ನು ಅರಿಯಬೇಕು. ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಪ್ರಕ್ರಿಯೆಯೇ ನವರಾತ್ರಿ.

ಶಂಕರಾಚಾರ್ಯರು ತಿರುಪತಿಯ ಎರಡು ಭಾಗಗಳಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದ್ದರು. ಅಗಸ್ತ್ಯ ಮುನಿಗಳು ಹೊರನಾಡಿನಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಿದರೆ ಆಚಾರ್ಯ ಶಂಕರರು ಕಾಮಾಕ್ಯವನ್ನು ಹೊರತು ಪಡಿಸಿ ಎಲ್ಲಾ ಶಕ್ತಿಪೀಠಗಳಲ್ಲಿ ಶ್ರೀ ಚಕ್ರ ಯಂತ್ರವನ್ನು ಸ್ಥಾಪಿಸಿದ್ದಾರೆ. ಕೊಲ್ಲೂರಿನಲ್ಲಿ ಸ್ವಯಂಸ್ಥಾಪಿತ ಸ್ವರ್ಣರೇಖಾಂಕಿತ ಶ್ರೀ ಚಕ್ರವಿದೆ. ಶಕ್ತಿಗೆ ಸಂಬಂಧಪಟ್ಟ ಸ್ವಯಂಭೂಲಿಂಗ ನೆಲೆಯಾಗಿರುವ ಏಕೈಕ ಸ್ಥಳವೇ ಕೊಲ್ಲೂರು.

ಹೆಣ್ಣು, ಪ್ರಕೃತಿ ಮತ್ತು ಗೋವಿನಲ್ಲಿ ಶಕ್ತಿಯ ಸಾನಿಧ್ಯವಿದೆ. ವಯಸ್ಸಾದ ತಂದೆ ತಾಯಿಯ ಸೇವೆ ಮಾಡುವುದು ನವರಾತ್ರಿಯ ಅನುಷ್ಠಾನದ ಭಾಗವೇ ಆಗಿದೆ. ಬಾಗಿನದಲ್ಲಿ ಸಮರ್ಪಿಸುವ ನವಧಾನ್ಯವು ನವಗ್ರಹವನ್ನು ಸಂಕೇತಿಸುತ್ತದೆ. ಬದುಕಿನ ಸಮೃದ್ಧತೆಗೆ ಕಾರಣವಾಗಿರುವ ಗೋ ಪೂಜೆಯು ಸಮೃದ್ಧತೆಯ ಸಂಕೇತವಾಗಿದೆ. ಅಶ್ವವು ಜ್ಞಾನ, ಆರೋಗ್ಯ ಮತ್ತು ಚಲನಶೀಲತೆಯ ಗುಣಗಳನ್ನು ಹೊಂದಿದ್ದರೆ, ಗಜವು ಗಾಂಭೀರ್ಯ ಅಥವಾ ರಾಜಕಳೆಯ ಸಂಕೇತವಾಗಿದೆ. ಗಜಲಕ್ಷ್ಮಿಯ ರೂಪದಲ್ಲಿ ದೇವಿಯು ಅಧಿಕಾರವನ್ನು ಕರುಣಿಸುತ್ತಾಳೆ. ಪ್ರಸ್ತುತ ನವರಾತ್ರಿಯಂದು ದೈವಿಕ ಕಾರ್ಯಗಳ ಜೊತೆಗೆ ಅಶಕ್ತರಿಗೆ ಸಹಾಯ ಮಾಡುವುದರಿಂದ ಸಾಮಾಜಿಕವಾಗಿಯೂ ನವರಾತ್ರಿ ಸಕಲಫಲಗಳನ್ನು ಕರುಣಿಸುತ್ತದೆ. ಪಂಚಭೂತ ತತ್ವಗಳಿಂದ ಮಹಾಮಾತೆಗೆ ಸಮರ್ಪಿಸುವ ಅಭಿಷೇಕವು ಸರ್ವಶ್ರೇಷ್ಠವಾಗಿದ್ದು, ಇದು ಶ್ರೀ ಯಂತ್ರಕ್ಕೆ ಚೈತನ್ಯವನ್ನು ನೀಡುತ್ತದೆ. ಶ್ರೀ ಚಕ್ರ ಉಪಾಸನೆಗಿರುವ ಇನ್ನೊಂದು ಹೆಸರೇ ಬ್ರಹ್ಮವಿದ್ಯೆ.