You are currently viewing ಪಿತೃಪಕ್ಷದ ಹಿನ್ನೆಲೆ, ಮಹತ್ವ ಮತ್ತು ಆಚರಣೆಯ ಬಗ್ಗೆ ಅವಧೂತರ ವಿಶೇಷ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಪಿತೃಪಕ್ಷದ ಹಿನ್ನೆಲೆ, ಮಹತ್ವ ಮತ್ತು ಆಚರಣೆಯ ಬಗ್ಗೆ ಅವಧೂತರ ವಿಶೇಷ ವಿಶ್ಲೇಷಣೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳು ಇವೆ. ಪಿತೃಪಕ್ಷದ ಸತ್ಯ ಮತ್ತು ಮಿಥ್ಯದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯಬೇಕಿದೆ. ಏಕಾದಶ ರುದ್ರರು, ದ್ವಾದಶ ಆದಿತ್ಯರು ಮತ್ತು ಅಷ್ಟವಸುಗಳು ಎನ್ನುವ ಮೂರು ಪಿತೃ ದೇವತೆಗಳು ಇವೆ. ಏಕಾದಶ ರುದ್ರರಿಗೆ ಸಂಬಂಧಿಸಿದಂತೆ ಶಿವನನ್ನು ಅಧಿ ದೇವತೆಯಾಗಿ ತಗೊಂಡಿರುವ ಮಂತ್ರ ರುದ್ರ ಮಂತ್ರ. ಅದುವೇ ರುದ್ರಾಭಿಷೇಕ. ವೇದ ಎನ್ನುವ ತತ್ವವನ್ನು ಒಬ್ಬ ಪಠಣೆ ಮಾಡಿದಾಗ ಅವನು ಬ್ರಾಹ್ಮಣತ್ವ ಪಡೆಯುತ್ತಾನೆ. ಬ್ರಾಹ್ಮಣ್ಯ ಅನ್ನುವುದು ಒಂದು ಸಂಸ್ಕಾರವೇ ಹೊರತು ಜಾತಿಯಲ್ಲ. ಎಲ್ಲಾ ಧರ್ಮಗಳೂ ಮನುಷ್ಯನ ಹುಟ್ಟು ಮತ್ತು ಸಾವನ್ನು ಬಹಳ ಗೌರವಯುತವಾಗಿ ನೋಡುತ್ತದೆ ಎನ್ನುವುದು ಪರಮ ಸತ್ಯ. ನಮ್ಮ ಪೂರ್ವಜರ ಪೈಕಿ ಮುತ್ತಜ್ಜ ರುದ್ರರ ಪ್ರತಿನಿಧಿ, ಅಜ್ಜ ದ್ವಾದಶ ಆದಿತ್ಯರ ಪ್ರತಿನಿಧಿ ಮತ್ತು ಅಪ್ಪ ಅಷ್ಟವಸುಗಳ ಪ್ರತಿನಿಧಿ ಎಂದೆನಿಸಿಕೊಳ್ಳುತ್ತಾರೆ. ಈ ಮೂರು ಪಿತೃಗಳಿಗೆ ಕೊನೆಯದಾಗಿ ಸಲ್ಲಿಸುವ ಗೌರವವೇ ತುಳಸೀ ತರ್ಪಣ. ಪುತ್ರನು ತಾನು ಮಾಡಿದ ಪುಣ್ಯಗಳನ್ನು ಮತ್ತು ಸತ್ಕರ್ಮಗಳನ್ನು ತನ್ನ ಪಿತೃವಿಗೆ ಧಾರೆಯೆರೆಯುವುದೇ ತರ್ಪಣದ ನಿಜಾರ್ಥವಾಗಿದೆ.

ತರ್ಪಣವನ್ನು ಸಮರ್ಪಿಸುವಾಗ ಎಳ್ಳು, ಅನ್ನದಿಂದ ಮಾಡಿದ ಪಿಂಡ ಮತ್ತು ಮೊಸರನ್ನು ಬಳಸಲಾಗುತ್ತದೆ. ಒಂದು ಜೀವಿಯ ಹುಟ್ಟಿಗೆ ಕಾರಣವಾಗುವ ವೀರ್ಯವು ಮೊಸರಿನ ರೂಪದಲ್ಲಿರುತ್ತದೆ. ಈ ಕಾರಣದಿಂದ ಅದರ ಪ್ರತೀಕವಾಗಿ ಪಿಂಡ ಪ್ರದಾನ ಸಂದರ್ಭ ಮೊಸರನ್ನು ಧಾರೆಯೆರೆಯಲಾಗುತ್ತದೆ. ಪಂಚ ಗಣಗಳಿಂದ ಪ್ರಾಣವು ಸೃಷ್ಠಿಯಾಗಿದೆ ಇದರ ಪ್ರತೀಕವೇ ಪಿಂಡದ ರೂಪವನ್ನು ಪಡೆಯುತ್ತದೆ. ಒಬ್ಬ ವ್ಯಕ್ತಿಯ ಮರಣಾ ನಂತರ ಅವನ ಇಹ ಶರೀರವನ್ನು ಸುಟ್ಟಿರಬಹುದು. ಆದರೆ ಅವನಲ್ಲಿ ಸೂಕ್ಷ್ಮ ಮತ್ತು ಕಾರಣ ಶರೀರಗಳು ಮರಣಾ ನಂತರವೂ ಜೀವಂತವಾಗಿಯೇ ಇರುತ್ತದೆ. ಇದನ್ನು ಸಾಂಕೇತಿಸಲು ಪಿಂಡವನ್ನು ಅರ್ಪಣೆ ಮಾಡಲಾಗುತ್ತದೆ. ಸಂಸ್ಕಾರ ಕ್ರಿಯೆಯ ನಂತರ ಆ ಪಿಂಡವನ್ನು ಕಾಗೆ ಅಥವಾ ಹಸುಗಳಿಗೆ ನೀಡುವ ಕ್ರಮವಿದೆ. ಹೀಗೆಂದ ಮಾತ್ರಕ್ಕೆ ಕಾಗೆಗಳೇ ಪಿತೃಗಳು ಎಂಬ ಅರ್ಥವಲ್ಲ. ಬದಲಿಗೆ ಪಶು ಪಕ್ಷಿಗಳ ಹಸಿವನ್ನು ತಣಿಸಲು ಹಿರಿಯರು ಕಂಡುಕೊಂಡ ರಹಸ್ಯ ಮಾರ್ಗ ಎಂದೂ ಪರಿಗಣಿಸಬಹುದು. ಅಣು ರೇಣು ತೃಣ ಕಾಷ್ಟಗಳಲ್ಲೂ ದೇವರನ್ನು ನೋಡು ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿದೆ. ಇದನ್ನು ಮೂಢನಂಬಿಕೆ ಎಂದು ಭಾವಿಸುವುದು ತಪ್ಪು ಕಲ್ಪನೆ.

ನಮ್ಮ ತಂದೆ ತಾಯಿಯರು ಜೀವಂತ ಇದ್ದಾಗ ಅವರನ್ನು ಶ್ರದ್ಧೆಯಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಜ್ಞಾನಿಗಳು ಅಥವಾ ಪ್ರವಾದಿಗಳು ಯಾವತ್ತೂ ಆಮಿಷಗಳು ಅಥವಾ ಸಂಪತ್ತಿನ ಹಿಂದೆ ಹೋಗುವುದಿಲ್ಲ. ಅವರಿದ್ದಲ್ಲೇ ಲಕ್ಷ್ಮಿ ಒಲಿಯುತ್ತಾಳೆ. ನಾವು ದೇಶದ ಋಣ ಅಥವಾ ಇನ್ನೊಂದು ಋಣದ ಹಿಂದೆ ಹೋಗುವ ಮೊದಲು ನಮ್ಮ ದೇಹದ ಋಣವನ್ನು ತೀರಿಸಬೇಕು. ನಮ್ಮನ್ನು ಸಾಕಿ ಸಲುಹಿದ ನಮ್ಮ ಹೆತ್ತವರ ಋಣವನ್ನು ತೀರಿಸಲಸಾಧ್ಯವಾದವನು ದೇಶದ ಋಣವನ್ನೋ ಇನ್ಯಾವುದೋ ಋಣವನ್ನೋ ತೀರಿಸಲು ಸಾಧ್ಯವಿಲ್ಲ. ಅನಾಥರಲ್ಲಿ ನಾಥನನ್ನು ಅಂದರೆ ದೇವರನ್ನು ನೋಡು ಎಂದು ಎಲ್ಲಾ ಧರ್ಮಗಳೂ ಹೇಳಿವೆ. ಪಿತೃಪಕ್ಷದ ಹೆಸರಿನಲ್ಲಿ ಅನವಶ್ಯಕವಾಗಿ ಖರ್ಚು ಮಾಡುವ ಬದಲು ಅನಾಥ – ನಿರ್ಗತಿಕರ ಹೊಟ್ಟೆ ತುಂಬಿಸುವುದೇ ಅತ್ಯಂತ ಪುಣ್ಯವುಳ್ಳ ಕಾರ್ಯ. ಪಿತೃಪಕ್ಷಕ್ಕೆ ಒಳ್ಳೆಯ ಕೆಲಸ ಮಾಡುವುದರ ಮೂಲಕ, ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ, ಯಾರಿಗಾದರೂ ಒಳಿತನ್ನು ಮಾಡಿದರೆ ಅದುವೇ ನಿಜವಾದ ಪಿತೃಪಕ್ಷ. ಪಿತೃಪಕ್ಷದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಅನ್ನುವುದು ಮೂರ್ಖತನವೇ ಸರಿ. ಹನ್ನೆರಡು ತಿಂಗಳು ಕೂಡಾ ಒಳ್ಳೆ ಕೆಲಸಗಳನ್ನೇ ಮಾಡಲು ದೇವರು ನಮ್ಮನ್ನು ಸೃಷ್ಟಿಸಿರುವುದು. ಹಾಗಾಗಿ ಒಳ್ಳೆಯ ಕೆಲಸ ಮಾಡಲು ಯಾವ ದಿನವೂ ಅಡ್ಡಿಯಲ್ಲ.

ಪಿತೃಪಕ್ಷದಲ್ಲಿ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಬಾರದು ಅನ್ನುವುದು ಶುದ್ಧ ಮೂರ್ಖತನ. ಅಪ್ಪ ಅಮ್ಮನಿಗೆ ಇಟ್ಟ ಎಡೆಯನ್ನು ತಿನ್ನಬಾರದು ಅನ್ನುವ ನಂಬಿಕೆಯ ಬಗ್ಗೆ ಕೂಡಾ ನಾವು ಯೋಚನೆ ಮಾಡಬೇಕು. ಎಡೆ ಅಂದರೆ ನಮ್ಮ ತಂದೆ ತಾಯಿ ಯಾವುದನ್ನು ನಮಗೆ ನೀಡಿರುತ್ತಾರೋ ಅದನ್ನು ಕೃತಜ್ಞತಾಪೂರ್ವಕವಾಗಿ ಅವರಿಗೆ ನೀಡುವುದಾಗಿದೆ. ಸನಾತನ ಧರ್ಮದ ಸಂಪ್ರದಾಯದಲ್ಲಿ ಪಿತೃಪಕ್ಷ ಅಂದರೆ ಅಣು, ರೇಣು, ತೃಣ ಕಾಷ್ಟದಲ್ಲೂ ದೇವರನ್ನು ನೋಡುವುದಾಗಿದೆ. ಒಬ್ಬ ಮನುಷ್ಯ ಬದುಕಲು ಯಾವುದೆಲ್ಲಾ ಸಹಾಯಕವಾಗುತ್ತೋ ಅವೆಲ್ಲಕ್ಕೂ ನಾವು ನಮಸ್ಕರಿಸುತ್ತೇವೆ. ಅದು ನಾವು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ. ನಮ್ಮ ಹೆತ್ತವರ ಎಡೆ ತಿನ್ನಬಾರದು ಅನ್ನುವವರು ತಂದೆ ತಾಯಿಯಿಂದ ಬಂದ ಆಸ್ತಿಯನ್ನೂ ಬಿಡಬೇಕು. ಆಷಾಡ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬಾರದು ಅನ್ನೋ ನಂಬಿಕೆಯೇ ಶುದ್ಧ ಸುಳ್ಳು. ಯಾರು ಧರ್ಮದ ಹೆಸರಿನಲ್ಲಿ ಇನ್ನೊಬ್ಬರಿಗೆ ಅಹಿತ ಮಾಡುತ್ತಾರೋ ಅವರು ಯಾವ ಧರ್ಮಕ್ಕೂ ಸೇರಿದವನಾಗಲು ಸಾಧ್ಯವಿಲ್ಲ.