You are currently viewing ಮಾಂಸಾಹಾರ ಮತ್ತು ದೇವತಾರಾಧನೆ | ಅವಧೂತ ಅವಲೋಕನ

ಮಾಂಸಾಹಾರ ಮತ್ತು ದೇವತಾರಾಧನೆ | ಅವಧೂತ ಅವಲೋಕನ

  • Post author:
  • Post category:article

ಭಾರತದ ಶ್ರೇಷ್ಠ ಆಧ್ಯಾತ್ಮ ಯೋಗಿಗಳಲ್ಲಿ ಒಬ್ಬರೆನಿಸಿರುವ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಜ್ಞಾನಸಾಗರದ ಅಂಶಗಳನ್ನು ಪದಗಳ ರೂಪದಲ್ಲಿ ಭಕ್ತ ಅನುಯಾಯಿಗಳೆದುರು ಪ್ರಸ್ತುತ ಪಡಿಸುತ್ತಿದ್ದೇವೆ. ಈ ಲೇಖನದಲ್ಲಿ ಅವಧೂತರು ಮಾಂಸಾರಾಧನೆ ಮತ್ತು ದೇವತಾರಾಧನೆಯ ಬಗ್ಗೆ ವ್ಯಕ್ತಪಡಿಸಿರುವ ಅನುಭಾವ ನುಡಿಗಳ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.


ಮನುಷ್ಯ ಶರೀರ ಮುಖ್ಯವಾಗಿ ಪಂಚಭೂತಗಳ ಮೇಲೆ ಅವಲಂಬಿತವಾಗಿದೆ. ಹಾಗೆಯೇ ಒಂದು ಜೀವಿ ಪ್ರಪಂಚದಲ್ಲಿ ಬದುಕಲು ಇನ್ನೊಂದು ಜೀವಿಯನ್ನು ಅವಲಂಬಿಸಿರುತ್ತದೆ. ಸಸ್ಯಗಳಿಗೂ ಜೀವ ಇರುತ್ತವೆ, ಪ್ರಾಣಿಗಳಿಗೂ ಜೀವ ಇವೆ. ನಮಗೆ ಅವಶ್ಯಕತೆ ಇಲ್ಲದಿದ್ದರೂ ಅಥವಾ ಅವಶ್ಯಕತೆಯ ಪರಿಧಿಯ ನಂತರವೂ ಒಂದು ಜೀವಿಯನ್ನು ಹಿಂಸಿಸುವುದು, ಭೇಟೆಯಾಡುವುದು ಅಥವಾ ಕೊಲ್ಲುವುದು ಹಿಂಸೆಯ ತುತ್ತ ತುದಿಯಾಗಿರುತ್ತದೆ. ಅದೇ ರೀತಿ ಆಹಾರ ಕ್ರಮದಲ್ಲಿ ಧಾರ್ಮಿಕವಾಗಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅನ್ನುವ ವಾದ ಕೂಡಾ ಮೂರ್ಖತನದ ಪರಮಾವಧಿಯಾಗಿದೆ. ಯಾಕೆಂದರೆ ದೇವರಿಗೂ ಆಹಾರಕ್ಕೂ ಯಾವುದೇ ಸಂಬಂಧ ಇಲ್ಲ.


ನಿಜವಾದ ಬ್ರಾಹ್ಮಣ ಅಂದರೆ ಅದು ಜಾತಿ ಅಲ್ಲ. ಸಮಾಜಕ್ಕೆ ಹಿತವಾಗಿ ಯಾವುದೇ ರೀತಿ ಮಾರಕವಾಗದೇ, ಚಿಂತನೆ ಮತ್ತು ನಡವಳಿಕೆಯಿಂದ ಸಮಾಜದ ಹಿತವನ್ನು ಬಯಸುವುದಾದರೆ ಅವನು ಬ್ರಾಹ್ಮಣ. ನಡವಳಿಕೆ ಮತ್ತು ಚಿಂತನೆ ಸಮಾಜಕ್ಕೆ ಮಾರಕವಾಗಿದ್ದರೆ ಅವನು ಶೂದ್ರ. ಯಾವುದೇ ಒಬ್ಬ ವ್ಯಕ್ತಿಯು ವೇದವನ್ನು ಪಠಿಸಿ, ಪುರಾಣ ಮತ್ತು ಪರಮಾತ್ಮನಿಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಂಡು ಮನನ ಮಾಡಿದರೆ ಆ ವ್ಯಕ್ತಿ ಆ ಕ್ಷಣದಿಂದ ಬ್ರಾಹ್ಮಣನೆನಿಸುತ್ತಾನೆ.

 
ಭಗವದ್ಗೀತೆಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ದೇವತೆಗಳು ಅಂತ ಮೂರು ವಿಧಗಳ ದೇವತೆಗಳಿದ್ದಾರೆ. ನಿರಾಕಾರ, ನಿರ್ಗುಣ ಪರಬ್ರಹ್ಮನ ಕೃಪೆಯು ಬೆಳಕಿನ ಮೂಲಕ ಸಮಾನವಾಗಿ ಎಲ್ಲ ಜೀವಿಗಳ ಮೇಲೂ ಬೀಳುತ್ತದೆ. ಅದರಲ್ಲಿ ಯಾವ ಜೀವಿಗಳಿಗೂ ಯಾವ ಜಾತಿಗಳ ಭೇದ ಬಾವವೂ ಇರುವುದಿಲ್ಲ. ಭಗವಂತನಿಗಿರುವ ಇನ್ನೊಂದು ಹೆಸರೇ ಪರಬ್ರಹ್ಮ. ಪರಬ್ರಹ್ಮನಿಗೆ ಯಾವ ಭೇದ ಬಾವವೂ ಇಲ್ಲ. ಯಾಕೆಂದರೆ ಪರಬ್ರಹ್ಮ ಅಂದರೆ ಅಭಯ. ಜ್ಞಾನಕ್ಕೆ ಯಾವುದೇ ಜಾತಿ ವ್ಯವಸ್ಥೆ ಇಲ್ಲವೆಂದೂ ಕೃಷ್ಣ ಪರಮಾತ್ಮ ತೋರಿಸಿಕೊಟ್ಟಿದ್ದಾನೆ. ಮುಸ್ಲಿಮರು ಮಾಂಸಾಹಾರ ತಿಂದು ನಮಾಝು ಮಾಡಿದರೆ ಅದನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ ಅಂದರೆ ಅದು ಮೂರ್ಖತನ. ಅಂದರೆ ಖುರಾನಿನಲ್ಲಿ ಆಹಾರ ಭೇದ ಇಲ್ಲ ಅನ್ನುವುದು ಸ್ಪಷ್ಟ. ತನ್ನ ರಕ್ತವೇ ದ್ರಾಕ್ಷಾ ರಸ, ತನ್ನ ಮಾಂಸವೇ ರೊಟ್ಟಿ ಎಂದು ಬೈಬಲ್ ನಲ್ಲಿ ಹೇಳಲಾಗಿದೆ. ಹಾಗಾಗಿ ಕ್ರಿಸ್ಚಿಯನ್ ನಲ್ಲೂ ಆಹಾರ ಭೇದ ಇಲ್ಲ ಅನ್ನುವುದು ಸ್ಪಷ್ಟ. ಅದೇ ರೀತಿ ಕೃಷ್ಣ ಭಗವಂತ ಸೇರಿದಂತೆ ಹಿಂದೂ ದೇವರುಗಳು ಕೂಡಾ ಆಗಾಗಿನ ಪರಂಪರೆಯಲ್ಲಿ ಇದ್ದಂತಹ ಆಹಾರ ಪದ್ಧತಿಯನ್ನು ಸ್ವೀಕಾರ ಮಾಡಿದ್ದರು. ಹಾಗಾಗಿ ಹಿಂದೂ ಧರ್ಮದಲ್ಲೂ ಆಹಾರದ ಭೇದ ಬಾವ ಇಲ್ಲ ಅನ್ನುವುದು ವಾಸ್ತವ.

 
ಜೀವಿಗಳಿಗೆ ಜ್ಞಾನ ಇರುವುದಿಲ್ಲ. ಆದರೆ ಆ ಜ್ಞಾನವನ್ನು ಪಡೆದುಕೊಳ್ಳಲು ಖುರಾನ್, ಬೈಬಲ್, ಗಾಯತ್ರಿ ಮಂತ್ರಗಳು ಸಹಾಯ ಮಾಡುತ್ತದೆ. ಎಲ್ಲ ಧರ್ಮಗಳ ಪ್ರಾರ್ಥನೆಗಳ ವಿಧಾನಗಳು ಬೇರೆ ಬೇರೆಯಾಗಿದ್ದರೂ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ಶಂಕರಾಚಾರ್ಯರಾಗಲೀ, ಮಧ್ವಾಚಾರ್ಯರಾಗಲೀ, ರಾಮಾನುಜರಾಗಲೀ ಎಲ್ಲರೂ ಸಮಾನತೆಯನ್ನು ಸಾರಿದವರು. ಎಲ್ಲಾ ಜಾತಿಯವರಿಗೂ ಅವರವರ ಜ್ಞಾನದ ಮಟ್ಟಕ್ಕೆ ಆಚರಣೆ ಮಾಡಬೇಕಾಗಿರುವುದನ್ನು ಭಗವದ್ಪಾದರು ಹೇಳಿದ್ದಾರೆ. ಆಚಾರತ್ರಯರ ಆಶ್ರಮಗಳು ಮತ್ತು ಇಡೀ ಜಗತ್ತು ವ್ಯಾಸರನ್ನು ಗುರುಪೂರ್ಣಿಮೆ ಮೂಲಕ ಪೂಜೆ ಮಾಡುತ್ತದೆ. ಯಾಕೆಂದರೆ ವ್ಯಾಸರು ಜ್ಞಾನದಿಂದ ಮಹಾ ಬ್ರಾಹ್ಮಣರಾಗಿದ್ದವರು. ಕೌಶಿಕ ಮಹಾಮುನಿಗಳು ಕೂಡಾ ಚಾತ್ರ ವೃತ್ತಿಯಲ್ಲಿರುವಾಗಲೇ ಮಾಂಸಾಹಾರವನ್ನು ಸೇವಿಸುತ್ತಿದ್ದರು. ವಿಶ್ವಾಮಿತ್ರರು ಕೂಡಾ ಜ್ಞಾನದಿಂದ ಬ್ರಾಹ್ಮಣರಾಗಿದ್ದವರು. ದೇವರನ್ನು ಪ್ರಾರ್ಥನೆ ಮಾಡಲು ಯಾವುದೇ ರೀತಿಯ ಆಹಾರ ನಿಬಂಧನೆಗಳಿಲ್ಲ. ದೇವರಿಗೆ ಬಾಹ್ಯ ಶುದ್ಧಿಗಿಂತ ಭಾವ ಶುದ್ಧಿ ಮುಖ್ಯವಾಗಿರುತ್ತದೆ. ಯಾವುದೇ ರೀತಿಯ ಆಹಾರ ಸೇವಿಸಿದರೂ ಯಾವ ಆಹಾರ ಕ್ರಮದಲ್ಲಿ ಮೇಲು ಕೀಳು ಅನ್ನುವುದಿಲ್ಲ. ಯಾಕೆಂದರೆ ಪರಮಾತ್ಮನಿಗೆ ಭಕ್ತರು ಏನು ತಿಂದು ಬರುತ್ತಾರೆ ಅನ್ನುವುದು ಮುಖ್ಯವಲ್ಲ. ಅದೇ ರೀತಿ ದಯೆ, ಪ್ರೀತಿ, ಸಹನೆಯೇ ಪರಮಾತ್ಮನ ಗುಣಗಳಾಗಿವೆ. ಹಿಂದಿನ ಕಾಲದಲ್ಲಿ ಜನರು ತುಳಿತಕ್ಕೊಳಗಾದ ಸಂಧರ್ಬದಲ್ಲಿ ಅವರಿಗೆ ಪೂಜೆಗೆ ದಾರಿ ಕಾಣದಿದ್ದಾಗ ಪ್ರಕೃತಿಯಲ್ಲಿ ಮರ, ಕಲ್ಲುಗಳನ್ನು ಮತ್ತು ಅದರೊಳಗಿರುವ ಚೈತನ್ಯವನ್ನು ದೇವರೆಂದು ಭಾವಿಸಿ ಪೂಜೆ ಮಾಡಿ ತಾವು ತಿನ್ನುವ ಆಹಾರವನ್ನೇ ದೇವರಿಗೆ ಅರ್ಪಣೆ ಮಾಡುತ್ತಿದ್ದರು. ಹಾಗಿರುವಾಗಲೂ ಭಗವಂತ ಅದನ್ನು ಸ್ವೀಕಾರ ಮಾಡಿದ್ದಾನೆ.

 
ದೈವಗಳೆಂದರೆ ಸಮಾನತೆಯ ಕ್ರಾಂತಿಕಾರರು. ದೇವರಿಗೆ ಯಾವುದೇ ರೀತಿಯ ಭೇದಭಾವವಿಲ್ಲ. ದೇವರು ಯಾರನ್ನೂ, ಯಾವುದನ್ನೂ ತಿರಸ್ಕಾರ ಮಾಡುವುದಿಲ್ಲ. ದೇವರಿಗೆ ಭಕ್ತ ಯಾವ ಆಹಾರ ಇಡುತ್ತಾನೆ ಅನ್ನುವುದು ಮುಖ್ಯವಲ್ಲ. ಯಾವ ಭಾವದಿಂದ ಪೂಜಿಸುತ್ತಾನೆ ಮತ್ತು ಅವನು ಎಷ್ಟು ಶುದ್ಧ ಅನ್ನುವುದು ಮುಖ್ಯವಾಗಿರುತ್ತದೆ. ಹಾಗೆಯೇ ನಮ್ಮ ಕೃತಜ್ಞತೆಯನ್ನು ಸಮರ್ಪಣೆ ಮಾಡುವುದೇ ಪ್ರಾರ್ಥನೆ. ಒಂದೊಂದು ದೇವಸ್ಥಾನಗಳಲ್ಲೂ ಅದರ ಸಂಪ್ರದಾಯ ಮತ್ತು ಅಲ್ಲಿನ ಪಾರಂಪರಿಕ ನಡತೆಗಳು ಕಾರ್ಯರೂಪದಲ್ಲಿರುತ್ತದೆ. ದೇವರಿಗೆ ಪೂರ್ಣ ಭಕ್ತಿಯಿಂದ ಏನನ್ನೂ ಕೊಟ್ಟರೂ ದೇವರು ಸ್ವೀಕರಿಸುತ್ತಾನೆ. ಆದರೆ ನಾವು ಒಂದೊಂದು ಚೌಕಟ್ಟಿಗೆ ಹೋಗುವಾಗ ಅಲ್ಲಿನ ಚೌಕಟ್ಟನ್ನು ಉಲ್ಲಂಘಿಸದೇ ಇರುವುದು ಒಂದು ಸಾಮಾನ್ಯ ಪ್ರಜ್ಞೆ. ಹಾಗಾಗಿ ಅವರವರ ಧರ್ಮಗಳ ಚೌಕಟ್ಟನ್ನು ಮೀರದಿರುವುದು ಒಳಿತು. ಅಲ್ಲದೇ ಪ್ರತಿಯೊಂದರಲ್ಲೂ ನಾವು ಸಮಾನ ಭಾವವನ್ನು ನೋಡಬೇಕು. ಅಸಹಾಯಕವಾಗಿರುವ ಪ್ರಾಣವನ್ನು ಪರಮಾತ್ಮನೆಡೆಗೆ ಕೊಂಡೊಯ್ಯುವುದೇ ಪ್ರಾರ್ಥನೆ. ಎಲ್ಲರ ಪ್ರಾರ್ಥನೆಗಳೂ ಒಂದೇ. ಆದರೆ ಭಾವಗಳು ಮಾತ್ರ ಬೇರೆ ಬೇರೆಯಾಗಿರುತ್ತವೆಯಷ್ಟೇ.

 
ಒಬ್ಬ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದರಿಂದ ದೇವರು ಅಪವಿತ್ರನಾಗುವುದಿಲ್ಲ. ಆದರೆ ಅದೇ ದೇವಸ್ಥಾನದಲ್ಲಿ ಒಂದು ಪದ್ಧತಿಯನ್ನು ರೂಡಿಸಿಕೊಂಡಿರುತ್ತಾರೆ. ಅವುಗಳನ್ನು ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ. ಹಾಗೆಯೇ ದೇವರು ನೋಡುವುದು ನಮ್ಮ ಆತ್ಮವನ್ನೇ ಹೊರತು ನಮ್ಮ ವೇಷ ಭೂಷಣ ಅಥವಾ ಆಹಾರವನ್ನಲ್ಲ. ಅವೆಲ್ಲವುದರ ಮಧ್ಯೆ ಧರ್ಮವನ್ನು ಸರಿಯಾಗಿ ಅರಿಯದ ಕೆಲವರು ಧರ್ಮದ ಹೆಸರಿನಲ್ಲಿ ಕೆಲವೊಂದು ಅನಾಚಾರಗಳನ್ನು ಮತ್ತು ದ್ವೇಷವನ್ನು ಹರಡುತ್ತಾರೆ. ಯಾವುದೇ ಧರ್ಮಗಳಲ್ಲೂ ಗಲಾಟೆ ಮಾಡುವಂತೆ ಹೇಳಲಿಲ್ಲ. ಆದರೆ ವಿಪರ್ಯಾಸವೆಂದರೆ ಧರ್ಮದ ಹೆಸರಿನಲ್ಲಿ ಗಲಾಟೆ ಗಲಭೆಗಳು ನಡೆಯುತ್ತಿವೆ. ಹಿಂದಿನ ಕಾಲದಲ್ಲಿ ದೇವಸ್ಥಾನಗಳನ್ನು ಕಟ್ಟಿಸಿದವರು ಅಥವಾ ಪ್ರತಿಷ್ಠೆ ಮಾಡಿದವರು ಅವರ ಭಾವನೆಗಳನ್ನು ಆಚರಣೆಯಾಗಿ ಇಟ್ಟಿರುತ್ತಾರೆ. ಎಲ್ಲಾ ಧರ್ಮಗಳಲ್ಲೂ ಸಹನೆ, ಸಹಿಷ್ಣುತೆ, ಒಂದಾಗುವಿಕೆ ಮತ್ತು ಭಾವೈಕ್ಯತೆಯನ್ನು ಹೇಳಲಾಗಿದೆ. ಧರ್ಮಗಳು ರಾಜಕೀಯವನ್ನು ನಡೆಸಬೇಕೇ ಹೊರತು ರಾಜಕೀಯ ಧರ್ಮಗಳನ್ನು ನಡೆಸುವಂತಾಗಬಾರದು. ಮಾನವೀಯ ಪ್ರಜ್ಞೆಯೇ ದೈವತ್ವದ ತುತ್ತ ತುದಿ. ನಾವು ಕೆಲವೊಂದು ದೇವಸ್ಥಾನಗಳಿಗೆ ಹೋಗುವಾಗ ಅಲ್ಲಿನದ್ದೇ ಆದ ನಿಯಮಗಳು ಇರುತ್ತವೆ. ಹಾಗಿರುವಾಗ ಅಲ್ಲಿನ ಆಚರಣೆಗಳನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ.