You are currently viewing ಮಾಟ-ಮಂತ್ರ ಅಥವಾ ತಾಂತ್ರಿಕ ವಿದ್ಯೆಯ ಆಚರಣೆ, ಪರಿಣಾಮ ಮತ್ತು ಪರಿಹಾರ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಮಾಟ-ಮಂತ್ರ ಅಥವಾ ತಾಂತ್ರಿಕ ವಿದ್ಯೆಯ ಆಚರಣೆ, ಪರಿಣಾಮ ಮತ್ತು ಪರಿಹಾರ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಮಾಟ-ಮಂತ್ರ ಎನ್ನುವ ಪರಿಕಲ್ಪನೆ ನಿಜವೇ ಸುಳ್ಳೇ ಎನ್ನುವುದು ಪ್ರಸ್ತುತ ಎಲ್ಲರಿಗೂ ಕಾಡುವ ಪ್ರಶ್ನೆ. ಹಗಲಿನಲ್ಲಿ ಬೆಳಕಿರುವಂತೆ ಕತ್ತಲಿನಲ್ಲಿ ಅಂಧಕಾರವಿರುವುದು ಜಗದ ನಿಯಮ. ಶಾಸ್ತ್ರಗಳಲ್ಲಿ ತಂತ್ರ, ಮಂತ್ರ ಮತ್ತು ಯಂತ್ರದ ಮಾರ್ಗಗಳ ಉಲ್ಲೇಖವಿದೆ. ತಾಂತ್ರಿಕ ವಿದ್ಯೆಯೂ ಒಂದು ತೆರನಾದ ಜ್ಞಾನವೇ. ಇಂತಹ ತಂತ್ರ ವಿದ್ಯೆಗಳ ಉಲ್ಲೇಖ ರಾಮಾಯಣದ ಕಾಲದಿಂದಲೂ ಇದೆ. ರಾವಣನ ಮಗ ಇಂದ್ರಜಿತು ತನ್ನ ಮಾಯಾ ವಿದ್ಯೆಗಳನ್ನು ಬಳಸಿ ಲಕ್ಷ್ಮಣನನ್ನು ಸಮ್ಮೋಹನಗೊಳಿಸಿದಾಗ ಆಂಜನೇಯ ಆ ತಂತ್ರಗಳನ್ನು ನಿಗ್ರಹಿಸಿದ. ಜ್ಞಾನಿ ಎನಿಸಿದವನಿಗೆ ಇಂತಹ ತಂತ್ರ-ಮಂತ್ರಗಳ ಪ್ರಯೋಗಗಳು ತಾಕುವುದಿಲ್ಲ. ಶಾಸ್ತ್ರಗಳಲ್ಲಿ ತಿಳಿಸಿದ ಕೆಲವು ವಿಶೇಷ ತೆರನಾದ ಶಕ್ತಿಗಳುಳ್ಳ ಮಂತ್ರಗಳನ್ನು ವಿಲೋಮವಾಗಿ ಪಠಿಸಿದಾಗ ಅದು ಶತ್ರು ನಾಶಕ್ಕೆ ಕಾರಣವಾಗುತ್ತದೆ. ಇಂತಹ ಶಕ್ತಿಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿದಾಗ ಅದು ತರ್ಕಬದ್ದವಾಗುತ್ತದೆ, ಕೆಟ್ಟ ಕಾರ್ಯಗಳಿಗೆ ವಿನಿಯೋಗಿಸಿದರೆ ಅಂಧಕಾರದಲ್ಲಿರಬೇಕಾಗುತ್ತದೆ. ತಂತ್ರೋಪಾಸನೆಯಂತಹ ಕೆಲಸಗಳು ಜನಸಂದಣಿಯಿರದ ಕಡೆಗಳಲ್ಲಿ ನಡೆಯುತ್ತದೆ. ಪೂರ್ಣತೆಯ ದಾರಿಯನ್ನು ಹಲವು ಮಹಾತ್ಮರು ಕ್ರಮಿಸಿ ಅದರಲ್ಲಿ ಸಾಗುವ ಬಗೆಯನ್ನು ತಿಳಿಸಿದ್ದಾರೆ. ಆ ದಾರಿಯಲ್ಲಿ ನಡೆಯುವವರಿಗೆ ಇಂತಹ ತಂತ್ರೋಪಾಸನೆಗಳು ತಟ್ಟುವುದಿಲ್ಲ. ಭಗವಂತನನ್ನು ಭಕ್ತಿಯಿಂದ ಪೂಜಿಸಿ ಸದಾ ಸತ್ಕರ್ಮದಲ್ಲೇ ತೊಡಗಿರುವವನಿಗೆ ಯಾವುದೇ ತಂತ್ರ-ಮಂತ್ರಗಳೂ ಏನೂ ಮಾಡುವುದಿಲ್ಲ. ಮನಃಶಕ್ತಿ ಗಟ್ಟಿಯಿದ್ದರೆ ಭಯದ ವಾತಾವರಣ ಸೃಷ್ಠಿಯಾಗುವುದಿಲ್ಲ.

ಮಾಂತ್ರಿಕ ತಂತ್ರಗಳಿಗೆ ಮೊಟ್ಟೆ ಮತ್ತು ನಿಂಬೆ ಹಣ್ಣನ್ನು ಬಳಸುತ್ತಾರೆ. ವೈಜ್ಞಾನಿಕವಾಗಿ ಇದಕ್ಕೆ ಸಂಬಂಧವಿದೆ. ಮೊಟ್ಟೆ ಮತ್ತು ನಿಂಬೆಹಣ್ಣಿನಲ್ಲಿ ಜೀವಾಂಶವಿದೆ. ಶಾಸ್ತ್ರಗಳಲ್ಲಿ ಇವನ್ನು ರಾಹುವಿಗೆ ಹೋಲಿಸಲಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಕಣ್ಣಿಗೆ ಕಾಣದಿದ್ದರೂ ಅದರ ಉಲ್ಲೇಖ ಶಾಸ್ತ್ರಗಳಲ್ಲಿದೆ. ನವಗ್ರಹಗಳಿಂದ ಒಳ್ಳೆಯ ಮತ್ತು ಕೆಟ್ಟಪರಿಣಾಮಗಳೆರಡೂ ಇದೆ. ಲಿಂಬೆಹಣ್ಣಿನ ಪ್ರಯೋಗ ಮೂಢನಂಬಿಕೆ ಎನ್ನುವುದು ಸುಳ್ಳು. ಇದೇ ನಿಂಬೆಹಣ್ಣನ್ನು ದೈಹಿಕ ಸಮಸ್ಯೆಗಳಾದ ಸಮಯದಲ್ಲಿ ಮದ್ದಾಗಿ ಉಪಯೋಗಿಸಲಾಗುತ್ತದೆ. ಸಾಮಾನ್ಯ ಜನರ ಅರಿವಿಗೆ ಯಾವುದೋ ಒಂದು ವಿದ್ಯೆ ಅರ್ಥವಾಗದಿದ್ದರೆ ಅದು ಮೂಢನಂಬಿಕೆ ಎಂದರ್ಥವಲ್ಲ. ವೈಜ್ಞಾನಿಕ ತಳಹದಿಯನ್ನು ನಂಬುವುದಾದರೆ ವಿಜ್ಞಾನದ ದೃಷ್ಠಿಗೆ ಗೋಚರಿಸದ ಅವೆಷ್ಟೋ ದೃಷ್ಠಾಂತಗಳು ನಮ್ಮ ಸುತ್ತಮುತ್ತಲೇ ಇದೆ. ಮಂತ್ರ ಪಠಣದಿಂದ ಒಬ್ಬ ವ್ಯಕ್ತಿಗೆ ತನ್ನ ಮನಸ್ಸನ್ನು ನಿಯಂತ್ರಣ ಮಾಡಲೂ ಸಾಧ್ಯ. ಅದೇ ಮಂತ್ರವನ್ನು ಕೆಟ್ಟ ಉದ್ದೇಶದಿಂದ ಪಠಿಸಿದಾಗ ಅಲ್ಲಿ ಕೆಟ್ಟ ಪರಿಣಾಮಗಳುಂಟಾಗುತ್ತದೆ. ಭೌತಿಕ ದೇಹವನ್ನು ಆಹಾರದಿಂದ, ಮನಸ್ಸನ್ನು ಯೋಗದಿಂದ ಮತ್ತು ಕಾರಣ ಶರೀರವನ್ನು ಧ್ಯಾನ ಮತ್ತು ಉಪವಾಸದಿಂದ ನಿಯಂತ್ರಣದಲ್ಲಿಡಬಹುದು. ಈ ಮೂರು ಅಂಶಗಳು ಸ್ಥಿರವಿದ್ದಲ್ಲಿ ಆ ವ್ಯಕ್ತಿಗೆ ಯಾವುದೇ ಖಾಯಿಲೆಗಳು ಅಂಟುವುದಿಲ್ಲ. ಕೆಡುಕು ಮತ್ತು ಒಳಿತುಗಳೆರಡನ್ನೂ ಮಂತ್ರಗಳ ಮುಖೇನವೇ ಮಾಡುವುದು. ಆದರೆ ಆರಾಧನೆ ಮಾಡುವ ಸ್ಥಳ ಹಾಗೂ ಆಚರಣೆಯಲ್ಲಿ ವ್ಯತ್ಯಾಸವಿರುತ್ತದೆ. ಪ್ರೇತ ಆರಾಧನೆಗಾಗಿ ಸಮಾಧಿಯನ್ನು ಆರಿಸಿ ಅಲ್ಲಿ ಇಂತಹ ಕೆಡುಕಿನ ಕಾರ್ಯಗಳನ್ನು ಮಾಡಲಾಗುತ್ತದೆ. ಅಮವಾಸ್ಯೆಯ ಕತ್ತಲು ಪ್ರೇತೋಪಾಸನೆಗೆ ಪ್ರಸಕ್ತವಾದ ದಿನವಾದುದರಿಂದ ಈ ಮಾಂತ್ರಿಕ ವಿದ್ಯೆಗಳನ್ನು ಅದೇ ದಿನ ಕೈಗೊಳ್ಳುತ್ತಾರೆ. ಅಜ್ಞಾನದ ಧರ್ಮ ಅಧರ್ಮ. ಆದುದರಿಂದ ಕೆಟ್ಟ ಕೆಲಸಕ್ಕೆ ಉಳಿಗಾಲವಿಲ್ಲ. ಯುವಕರು ಹನುಮಾನ್ ಚಾಲೀಸ, ಗಾಯತ್ರೀ ಮಂತ್ರಗಳನ್ನು ಪಠಿಸಿ, ಸತ್ಚಿಂತನೆ ಮಾಡುವುದರಿಂದ ಇಂತಹ ಮಾಂತ್ರಿಕ ಪ್ರಯೋಗಗಳಿಂದ ಪಾರಾಗಬಹುದು.