You are currently viewing ಮೃತ್ಯುವಿನ ನಂತರದ ಜೀವನ | ಆಧ್ಯಾತ್ಮ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಮೃತ್ಯುವಿನ ನಂತರದ ಜೀವನ | ಆಧ್ಯಾತ್ಮ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಮೃತ್ಯುವಿನ ನಂತರದ ಜೀವನ ಎಂಬ ಪದವು ಗಾಢಾರ್ಥವನ್ನು ನೀಡುತ್ತದೆ. ಈ ಲೋಕವನ್ನು ಮರ್ಥ್ಯ ಲೋಕ ಎನ್ನಲಾಗುತ್ತದೆ. ಇದರರ್ಥ ಮೃತ್ಯುವಿಗೆ ಒಳಪಟ್ಟವರು ಜೀವಿಸುವ ಲೋಕ. ಜನ್ಮಗಳ ಸಿದ್ಧಾಂತವನ್ನು ಮೂರೂ ಪ್ರಮುಖ ಧರ್ಮ ಗ್ರಂಥಗಳೂ ಉಲ್ಲೇಖ ಮಾಡಿವೆ. ಪುನರ್ಜನ್ಮ ಎನ್ನುವುದು ಸುಳ್ಳಲ್ಲ. ಜೀವಕ್ಕೆ ಸಾವಿಲ್ಲ ಎನ್ನುವುದನ್ನು ಶಾಸ್ತ್ರಗಳೂ ಒಪ್ಪಿಕೊಂಡಿವೆ. ಸನಾತನ ಧರ್ಮವು ಜೀವ ಮತ್ತು ದೇಹವನ್ನು ವಿಂಗಡಿಸಿ ಮಾತನಾಡಿದೆ. ಜೀವವು ಚಿದಾನಂದ ರೂಪವಾಗಿರುವುದರಿಂದ ಅದಕ್ಕೆ ಮೃತ್ಯು ಎನ್ನುವುದಿಲ್ಲ. ಆತ್ಮವು ತನ್ನ ಜೀವನೋದ್ದೇಶವನ್ನು ಪೂರ್ಣಗೊಳಿಸುವವರೆಗೆ ದೇಹದಿಂದ ದೇಹಕ್ಕೆ ಜನ್ಮಗಳ ಮೂಲಕ ಪ್ರವೇಶಿಸುತ್ತದೆ. ಪ್ರತಿಯೊಂದು ಜನ್ಮದಲ್ಲೂ ಆತ್ಮ ಸಂಸ್ಕಾರವನ್ನು ಪಡೆಯುತ್ತಾ ಸಾಗುತ್ತದೆ. ಪ್ರತಿಯೊಂದು ಜನ್ಮದ ಪ್ರಭಾವವೂ ಮನಸ್ಸಿನೊಳಗೆ ಅತೀಂದ್ರಿಯವಾಗಿ ನೆಲೆಸಿರುತ್ತದೆ. ಮನುಷ್ಯನಿಗೆ ಹೊರ ಮತ್ತು ಒಳ ಎಂಬ ಎರಡು ಬಗೆಯ ಮನಸ್ಸುಗಳಿವೆ. ಒಳ ಮನಸ್ಸು ಪರಮೇಶ್ವರನಿಂದ ನಿರ್ಮಿಸಲ್ಪಟ್ಟಿದೆ. ಇದನ್ನು ಅಂತರ್ವಾಣಿ, ಅಂತರಾತ್ಮ ಎಂಬಿತ್ಯಾದಿ ಹೆಸರುಗಳ ಮುಖೇನ ವ್ಯಾಖ್ಯಾನಿಸಬಹುದು. ಹೊರ ಮನಸ್ಸು ಹೊರ ಜಗತ್ತಿನ ಪ್ರಭಾವದಿಂದ ರೂಪುಗೊಳ್ಳುತ್ತದೆ. ಈ ಹೊರ ಜಗತ್ತಿನ ಪ್ರಭಾವವು ದಿನ ನಿತ್ಯದ ಮೃತ್ಯುವನ್ನು ಕರುಣಿಸುತ್ತದೆ. ಜೀವನ ಎನ್ನುವ ಪದದ ವ್ಯಾಖ್ಯಾನವು ಜೀವದ ಬೆಳವಣಿಗೆ ಎಂಬ ಅರ್ಥವನ್ನು ನೀಡುತ್ತದೆ. ದೇಹದ ಬೆಳವಣಿಗೆಯು ವೀರ್ಯದಿಂದ ಶುರುವಾಗಿ ಶರೀರ ರೂಪ ಪಡೆದು ಇತರರು ಕೊಡುವ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಆತ್ಮವು ಕಾಲ್ಪನಿಕ ಪ್ರಪಂಚವನ್ನು ಸಂಧಿಸುತ್ತದೆ. ಈ ಕಾಲ್ಪನಿಕ ಲೋಕದ ಪ್ರಭಾವದಿಂದ ಆತ್ಮವು ತನ್ನೊಳಗೆ ಅಂತಹುದೇ ಕಾಲ್ಪನಿಕ ಆಲೋಚನೆಗಳನ್ನು ಮಾಡುತ್ತದೆ. ಕೊನೆಗೊಂದು ದಿನ ಈ ದೇಹವು ಮಣ್ಣಿನಲ್ಲಿ ಮಣ್ಣಾಗುತ್ತದೆ. ಇದು ದೇಹದ ಬೆಳವಣಿಗೆ ಅಥವಾ ಪ್ರಾಪಂಚಿಕ ಬೆಳವಣಿಗೆಯಾಗಿದೆ. ಜೀವದ ಬೆಳವಣಿಗೆಗೆ ಚಿಂತನೆಗಳು ಬೇಕು. ದೇಹದ ಬೆಳವಣಿಗೆಗೆ ಆರೋಗ್ಯ ಉತ್ತಮವಾಗಿದ್ದರೆ ಸಾಕು. ಮೆದುಳಿನ ಭಾಷೆಯು ಸ್ವಂತ ಚಿಂತನೆಗಳಿಂದ ನಿರ್ಮಿತವಾಗಿದೆ. ಮನಸ್ಸು ಅಸಂಖ್ಯಾತ ಆಲೋಚನೆಗಳಿಂದ ಕೂಡಿದೆ. ಇದನ್ನು ಸಮೀಕರಿಸಲು ಸಂಸ್ಕಾರ ಅತ್ಯವಶ್ಯಕ. ಮನಸ್ಸನ್ನು ಸರಿಯಾಗಿಸುವ ಕೆಲಸವನ್ನು ಗುರು ಮಾಡುತ್ತಾನೆ. ಆಶ್ರಮಗಳೂ ಇಂತಹಾ ಕೆಲಸವನ್ನು ಮಾಡಬೇಕು. ಸಂಸ್ಕಾರದ ಜೊತೆಗೆ ದೇಹ ಮತ್ತು ಜೀವದ ಬೆಳವಣಿಗೆಯಾದಾಗ ಅದು ಜೀವನ ಎನಿಸಿಕೊಳ್ಳುತ್ತದೆ. ಸಿದ್ಧಾಂತವನ್ನು ಚಿಂತನೆಗೆ ಒಳಪಡಿಸಿ ಬದುಕಿಗೆ ಅರ್ಥವನ್ನು ಹುಡುಕಿಕೊಂಡಾಗ ಬದುಕು ನಿಜಾರ್ಥದಲ್ಲಿ ಹುಟ್ಟುಹಬ್ಬ ಎನಿಸಿಕೊಳ್ಳುತ್ತದೆ.

ಮೃತ್ಯು ಎಂದರೆ ನಾಶ ಎಂದರ್ಥ. ಮೃತ್ಯುವಿನಲ್ಲಿ ಮೂರು ವಿಧಗಳಿವೆ. ಮೃತ್ಯುವನ್ನು ಲಯವೆಂದೂ ಕರೆಯಲಾಗುತ್ತದೆ. ಲಯದ ನಿಜಾರ್ಥ ನಾಶ ಎನ್ನುವುದಕ್ಕಿಂತ ಸರಿದಾರಿಗೆ ತರುವಂತಹದ್ದು ಎಂಬ ಅರ್ಥವನ್ನು ಕಲ್ಪಿಸುತ್ತದೆ. ಮೃತ್ಯುವಿನ ಮೂರು ಪ್ರಕಾರಗಳಲ್ಲಿ ಒಂದು ಪ್ರಳಯ. ಇದು ನಾವು ನಿದ್ರಿಸುವಾಗ ಜರುಗುವ ಪ್ರಕ್ರಿಯೆ. ಇಲ್ಲಿ ಶರೀರ ಜಡ ಸ್ವರೂಪದಲ್ಲಿರುತ್ತದೆ. ಮನಸ್ಸು ಜಾಗೃತವಾಗಿದ್ದಾಗ ಅದು ಕನಸಿನ ರೂಪವನ್ನು ಪಡೆಯುತ್ತದೆ. ದೇಹ, ಮನಸ್ಸು ಮತ್ತು ಬುದ್ಧಿ ಎಚ್ಚರವಾಗಿದ್ದರೆ ಅದನ್ನು ಜಾಗೃತಾವಸ್ಥೆ ಎನ್ನುತ್ತೇವೆ. ಗಾಢ ನಿದ್ದೆಯಲ್ಲಿ ಸಂಭವಿಸುವ ದಿನಮೃತ್ಯು ಎಚ್ಚರವಾದಾಗ ಬುದ್ಧಿಯ ಸಹಾಯದಿಂದ ಮತ್ತೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ. ಆತ್ಮವು ಶರೀರವನ್ನು ಪ್ರವೇಶಿಸುವುದು ಆ ಆತ್ಮದ ಆಸೆಯ ಪೂರ್ಣತ್ವಕ್ಕಾಗಿ ಆಗಿದೆ. ಕಾಮವೇ ಜನ್ಮಕ್ಕೆ ಕಾರಣವಾಗಿದೆ. ಕಾಮನೆಯ ಅನ್ವೇಷಣೆ ಆತ್ಮದ ಗುರಿಯಾಗಿರುತ್ತದೆ. ಶರೀರ ಬಯಸುವ ಹಲವು ಕಾಮಗಳಲ್ಲಿ ಸತ್ಯಾನ್ವೇಷಣೆಯ ಕಾಮವು ಅತ್ಯಂತ ಶ್ರೇಷ್ಠವಾಗಿದೆ. ಸತ್ಯವನ್ನು ಅನ್ವೇಷಿಸಿದ ಋಷಿ ಶ್ರೇಷ್ಠನು ಸತ್ಯಕಾಮನೆಂದು ಉಲ್ಲೇಖಿತನಾಗಿದ್ದಾನೆ. ಸರ್ವಶಕ್ತಿಯ ಮೂಲದ ಹುಡುಕಾಟವೇ ಈ ಸತ್ಯಾನ್ವೇಷಣೆ. ಆತ್ಮವು ತನ್ನ ಉದ್ದೇಶವನ್ನು ಹುಡುಕುವ ಪ್ರಕ್ರಿಯೆಯೇ ಆಧ್ಯಾತ್ಮ. ನಮ್ಮೊಳಗಿರುವ ಆದಿ ಶಕ್ತಿಯ ಮೂಲವನ್ನು ಹುಡುಕುವ ಪ್ರಕ್ರಿಯೆಯೂ ಆಧ್ಯಾತ್ಮವೇ ಆಗಿದೆ. ಒಬ್ಬ ವ್ಯಕ್ತಿ ಸತ್ತ ನಂತರ ಆತನ ಆತ್ಮವು ಹಳೆಯ ನೆನಪುಗಳೊಂದಿಗೆ ಆ ದೇಹವನ್ನು ತ್ಯಜಿಸುತ್ತದೆ. ಭಗವಂತ ಹದಿನಾಲ್ಕು ಲೋಕಗಳನ್ನು ಸೃಷ್ಠಿಸಿದ್ದಾನೆ. ಕರ್ಮಗಳ ಫಲವು ನಮ್ಮನ್ನು ಯಾವ ಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವುದನ್ನು ನಿರ್ಮಿಸುತ್ತದೆ. ಈ ಪ್ರಕ್ರಿಯೆಯೇ ಜನನ ಮರಣ. ಈ ಆಟವನ್ನು ಮುಗಿಸಲು ಬಯಸುವವನು ಜೀವ ದೇಹಧಾರಿಯಾಗಿದ್ದಾಗಲೇ ತಪಸ್ಸಿನ ಮೂಲಕ ಈ ಪರಮ ಸತ್ಯವನ್ನು ಹುಡುಕುತ್ತಾನೆ. ಸಾವಿನ ನಂತರ ಆ ಆತ್ಮದ ಕರ್ಮಕ್ಕನುಸಾರವಾಗಿ ದೇಹದ ಆಯ್ಕೆ ನಡೆಯುತ್ತದೆ. ಗರುಡ ಪುರಾಣ ಇದಕ್ಕೆ ಹಲವು ಸಾಕ್ಷಿಗಳನ್ನು ಒದಗಿಸಿದೆ. ವೈದ್ಯಕೀಯ ಜಗತ್ತು ಹಲವು ವಿದ್ಯೆಗಳಿಂದ ಇದನ್ನು ನಿರೂಪಿಸಿದೆ. ತನ್ನ ನಿಜ ಅಸ್ತಿತ್ವವನ್ನು ಹುಡುಕಿಕೊಳ್ಳುವವನೇ ನಿಜವಾದ ಜ್ಞಾನಿ.

ಪರಮ ಜ್ಞಾನಿಯು ತಪಸ್ಸಿನ ಮೂಲಕ ಪರಮ ಪದವನ್ನು ತಲುಪುತ್ತಾನೆ. ಸತ್ಕರ್ಮಗಳನ್ನು ಮಾಡಿದವನು ಸ್ವರ್ಗ ಲೋಕವನ್ನು ತಲುಪುತ್ತಾನೆ. ಸ್ವರ್ಗವೇ ಇಲ್ಲ ಎನ್ನುವ ವಾದ ತಪ್ಪು. ಸಮಯ ಬದಲಾದಂತೆ ವಾಸ್ತವದ ವಾದಗಳೂ ಬದಲಾಗುತ್ತದೆ. ಸತ್ಯದ ಅರಿವು ಅನುಭವದ ಒಳಗೆ ಅಡಗಿದೆ. ಹುರುಳಿಲ್ಲದ ವಾದವು ವಿವಾದ ಮತು ವಿಷಾದಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಧರ್ಮ ಸಂಘರ್ಷಗಳು ನಡೆಯುತ್ತಿದೆ. ಧರ್ಮದಲ್ಲಿ ಸಂಘರ್ಷವಿಲ್ಲ. ಅಸ್ತಿತ್ವದ ಅಹಂಭಾವವು ಸಂಘರ್ಷಕ್ಕೆ ಕಾರಣ. ಮಾನವೀಯತೆಯು ಧರ್ಮದ ಉತ್ತಮ ಮೌಲ್ಯವಾಗಿದೆ. ಜೀವವೆಂಬ ಬೆಳಕು ತಾನು ಯಾರು ಎಂದು ಅರಿತಾಗ ದೇಹವೆಂಬ ಅಜ್ಞಾನ ಭಾವ ಕಳಚಿಕೊಳ್ಳುತ್ತದೆ. ಅಲ್ಲಿಯ ತನಕ ಇಹದ ಅಜ್ಞಾನವು ಮೂರ್ಖತನವಾಗಿ ನಮ್ಮೊಳಗೆ ಇರುತ್ತದೆ. ಜಗತ್ತಿನಲ್ಲಿ ತನ್ನ ವಿನಃ ಏನೂ ನಡೆಯುವುದಿಲ್ಲ ಎನ್ನುವುದು ಮೂರ್ಖತನದ ಪರಮಾವಧಿ. ನಮ್ಮ ನಂತರ ಇನ್ನೊಬ್ಬರು ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಜಗತ್ತಿನಲ್ಲಿ ಅಂತಿಮವಾಗಿ ಉಳಿಯುವುದು ಬೆಳಕು, ಅದಕ್ಕೆ ನಾಶವಿಲ್ಲ. ಇದನ್ನೇ ಕುವೆಂಪು ಕರುನಾಡು ಬಾ ಬೆಳಕೇ ಎಂದಿರುವುದು. ವೇದಗಳೂ ಬೆಳಕಿಗೆ ದೇವರ ಸ್ಥಾನವನ್ನು ನೀಡಿದೆ. ಪ್ರತಿಯೊಂದು ಧರ್ಮ ಸಿದ್ಧಾಂತಗಳೂ ಈ ವಿಷಯವನ್ನು ಉಲ್ಲೇಖಿಸಿದೆ. ಈ ಸತ್ಯವನ್ನು ಅರಿತಾಗ ಜೀವನ ಗೊಂದಲಗಳಿಲ್ಲದೆ ಸಾಗುತ್ತದೆ. ಪ್ರಸ್ತುತ ತನ್ನಲ್ಲಿರುವ ಗೊಂದಲವನ್ನು ಸಮಾಜದ ಮೇಲೆ ಹೇರುವ ಕೆಲಸಗಳಾಗುತ್ತಿದೆ. ಇದರ ಹೊಡೆತವನ್ನು ದೇಶ ಅನುಭವಿಸುತ್ತಿದೆ. ನಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಇತರರ ಮೇಲೆ ಬಲವಂತವಾಗಿ ಹೇರುವ ಕೆಲಸಗಳು ಕೊನೆಯಾಗಬೇಕು. ಅಧಿಪತ್ಯವನ್ನು ಸಾಧಿಸುವುದು ಇದರ ಮೂಲ ಉದ್ದೇಶ. ಈ ಪ್ರಕ್ರಿಯೆಯು ಮನೆಯಿಂದಲೇ ಆರಂಭವಾಗುತ್ತದೆ. ಹಿಂಸೆ ಶುರುವಾದದ್ದು ತನ್ನಿಂದ ಎಂಬ ಭಾವವನ್ನು ಮೊದಲು ತಿಳಿಯಬೇಕು. ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬುದ್ಧಿ, ಚಿಂತನೆ ಮತ್ತು ಬದುಕು ಬದಲಾದಾಗ ಅದು ಜಗತ್ತಿನ ಸುಧಾರಣೆಗೆ ಕಾರಣವಾಗುತ್ತದೆ.