You are currently viewing ಶಿವಾರಾಧನೆಯಲ್ಲಿ ಲಿಂಗಪೂಜೆ ಮತ್ತು ನರ್ಮದಾ ಲಿಂಗದ ಮಹತ್ವ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಶಿವಾರಾಧನೆಯಲ್ಲಿ ಲಿಂಗಪೂಜೆ ಮತ್ತು ನರ್ಮದಾ ಲಿಂಗದ ಮಹತ್ವ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಶೈವ ತತ್ವದ ಆಚರಣೆಯನ್ನು ಮಾಡಬಯಸುವವರು ಲಿಂಗಪೂಜೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆಯ ರಹಸ್ಯ, ಆಚರಣಾ ಪದ್ದತಿ ಮೊದಲಾದವುಗಳ ಬಗ್ಗೆ ಉತ್ತಮ ಜ್ಞಾನವನ್ನು ಪಡೆಯಬೇಕು. ಅದರಲ್ಲೂ ಇಂತಹ ಸಿದ್ಧಾಂತಗಳನ್ನು ಬೋಧೀಸುವವರು ಶೈವ ಸಿದ್ಧಾಂತದ ಮೂಲ ಸಾರವನ್ನು ಬಲ್ಲವರಾಗಿರಬೇಕಾಗುತ್ತದೆ. ಶೈವ ಸಿದ್ದಾಂತದಲ್ಲಿ ಲಿಂಗಪೂಜೆಯು ಪ್ರಾಣಲಿಂಗದಿಂದ ಪ್ರಣವ ಲಿಂಗದ ನಡುವಣ ಬಹುದೊಡ್ಡ ಆಧ್ಯಾತ್ಮವಾಗಿದ್ದು, ಅದನ್ನು ಅರ್ಥೈಸಿಕೊಳ್ಳಬೇಕು. ಪಂಚಭೂತಗಳ ಅಂಶಗಳನ್ನೊಳಗೊಂಡ ಒಂದು ಲಿಂಗವನ್ನು ಹಸ್ತದಲ್ಲಿ ಧಾರಣೆ ಮಾಡಿ ಜ್ಞಾನ ಚಕ್ಷ್ಮವನ್ನು ಅದರಲ್ಲಿ ಕೇಂದ್ರೀಕರಿಸಿ ಬ್ರಹ್ಮಜ್ಞಾನದ ಕಡೆಗೆ ನಡೆಯುವ ಪ್ರಯಾಣವನ್ನು ಆಧ್ಯಾತ್ಮ ಎನ್ನಲಾಗುತ್ತದೆ. ಇದರ ಕ್ರಮಾಚರಣೆಯನ್ನು ನೋಡುವುದಾದರೆ ಸೃಷ್ಠಿಯನ್ನೇ ಸಮೀಕರಿಸಿ ಲಿಂಗದ ರೂಪಕ್ಕೆ ತಂದು ಆರಾಧಿಸುವುದೇ ಇಷ್ಟಲಿಂಗ. ಆ ಲಿಂಗಕ್ಕೆ ಪ್ರಾಣಶಕ್ತಿಯನ್ನು ಪ್ರವಹಿಸಿ ಅದನ್ನು ಪ್ರಾಣಲಿಂಗ ಮಾಡಿ ಆ ಪ್ರಾಣದಲ್ಲಿ ಭಕ್ತಿಯನ್ನು ಹಾಕಿದಾಗ ಭಕ್ತನೇ ಪರಮೇಶ್ವರನಾಗಿ ತತ್ವಗಳನ್ನು ಅರಿಯುವುದನ್ನು ಪ್ರಣವಲಿಂಗ ಎನ್ನಲಾಗುತ್ತದೆ. ಇದನ್ನೇ ಆತ್ಮ ಸಾಕ್ಷಾತ್ಕಾರ ಎನ್ನುವುದು. ಆತ್ಮ ಸಾಕ್ಷಾತ್ಕಾರದ ಅನುಭೂತಿಯನ್ನು ಪಡೆಯುವುದೇ ಆತ್ಮಜ್ಞಾನ ಎನಿಸಿಕೊಳ್ಳುತ್ತದೆ.

ಲಿಂಗ ಪೂಜೆಯಲ್ಲಿ ಇಷ್ಟಲಿಂಗವನ್ನು ಎಡ ಕೈಯ್ಯಲ್ಲಿ ಧಾರಣೆ ಮಾಡುವುದೇಕೆ ಎನ್ನುವ ಪ್ರಶ್ನೆಯು ಹಲವು ಜನರನ್ನು ಬಹುವಾಗಿ ಕಾಡುತ್ತದೆ. ಇದಕ್ಕೆ ಉತ್ತರ, ಮನುಷ್ಯನ ದೇಹವು ಶಿವ ಮತ್ತು ಶಕ್ತಿ ಭಾಗಗಳೆಂದು ವಿಭಜಿಸಲ್ಪಟ್ಟಿದೆ. ಪುರುಷ ಮತ್ತು ಪ್ರಕೃತಿಯ ತತ್ವದೊಳಗೆ ಜೀವಿಯ ಅಸ್ತಿತ್ವವಿದೆ. ಅದನ್ನು ದಾಟಿದಾಗ ಮನುಷ್ಯ ಅರ್ಧನಾರೀಶ್ವರ ತತ್ವವನ್ನು ಕಂಡುಕೊಳ್ಳುತ್ತಾನೆ. ದೇಹದ ಈ ವಿಭಜನೆಯನ್ನು ಇಡ ಮತ್ತು ಪಿಂಗಳ ಎನ್ನಲಾಗುತ್ತದೆ. ಇದು ಸೃಷ್ಠಿಯ ಎಲ್ಲದರೊಳಗೂ ನೆಲೆಯಾಗಿದೆ. ಪುರುಷ ಮತ್ತು ಆದಿಪ್ರಕೃತಿಯ ಸೇರುವಿಕೆಯಿಂದಲೇ ಶಿವಲಿಂಗ ಸೃಷ್ಠಿಯಾದದ್ದು. ಶಿವಲಿಂಗದ ಪೂರ್ಣತ್ವವವನ್ನು ಅರಿಯಲು ಲಿಂಗಪೂಜೆಯ ಸಂದರ್ಭ ಇಷ್ಟಲಿಂಗವನ್ನು ಅಂಗೈಯ್ಯಲ್ಲಿ ಧಾರಣೆ ಮಾಡಲಾಗುತ್ತದೆ. ಇಲ್ಲಿ ಲಿಂಗವನ್ನು ಎಡಗೈಯ್ಯಲ್ಲಿಟ್ಟು ಶಿವಪೂಜೆ ಮಾಡುವುದು ತಪ್ಪು ಎನ್ನುವ ಅರ್ಥ ಬರುವುದಿಲ್ಲ. ಯಾಕೆಂದರೆ ಆ ಭಾಗವು ವಾಮಾಂಗಿಯಾದ ಪಾರ್ವತಿಯ ವಾಸಸ್ಥಾನವಾಗಿದೆ. ಪುರುಷ ಮತ್ತು ಪ್ರಕೃತಿಯಿಂದ ಕೂಡಿದ ಈ ಶರೀರದಲ್ಲಿ ಎಡ ಭಾಗವು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ಇದೇ ಕಾರಣಕ್ಕೆ ಎಡಗೈಯ್ಯಲ್ಲಿ ಲಿಂಗವನ್ನಿಡುವುದು. ಮನಸ್ಸಿನೊಳಗಿರುವ ಶಿವನನ್ನು ಕಾಣುವ ಮಾಧ್ಯಮವೇ ಲಿಂಗಪೂಜೆ. ಈ ಲಿಂಗವನ್ನು ತದೇಕಚಿತ್ತದಿಂದ ದರ್ಶಿಸುವುದರಿಂದ ಮೆದುಳಿನ ಆರು ವಲಯಗಳು ತೆರೆದುಕೊಳ್ಳುತ್ತದೆ. ಸತ್ಕರ್ಮದೊಂದಿಗೆ ಲಿಂಗಪೂಜೆ ಮಾಡುವವರಿಗೆ ಯಾವುದೇ ಖಾಯಿಲೆಗಳು ಬಾಧಿಸುವುದಿಲ್ಲ ಎನ್ನುವುದು ಪುರಾಣೇತಿಹಾಸಗಳಿಂದ ದೃಢಪಟ್ಟಿದೆ.

ಶಿವಪೂಜೆಯಲ್ಲಿ ಅತೀ ಮುಖ್ಯವಾದದ್ದು ಬಿಲ್ವಪತ್ರೆ, ಇದು ಸತ್ಯ ಅಸತ್ಯಗಳನ್ನು ಸಾಂಕೇತಿಸುತ್ತದೆ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಮನುಷ್ಯನ ಮನಸ್ಸಿನಲ್ಲಿ ಸದಾ ಇರುತ್ತದೆ. ಇಂತಹಾ ಗೊಂದಲಗಳಿಂದ ಹೊರ ಬರುವವನನ್ನು ಯೋಗಿ ಎನ್ನಲಾಗುತ್ತದೆ. ಬಿಲ್ವಪತ್ರೆಯು ಜೀವಂತ ಶಿವ ಸ್ವರೂಪವಾಗಿದ್ದು, ಬಿಲ್ವಪತ್ರೆ ಎಲೆಯನ್ನು ದಿನವೂ ಸೇವಿಸುವವರಿಗೆ ಖಾಯಿಲೆಗಳು ಬಾಧಿಸುವುದಿಲ್ಲ ಯೋಗಿಗೆ ಹೊರ ಜಗತ್ತಿನ ಭೋಗದ ಆಸೆಯಿರುವುದಿಲ್ಲ. ಶ್ರೀ ಸಿದ್ಧಗಂಗಾ ಶ್ರೀಗಳೇ ಇದಕ್ಕೆ ಪರಮ ನಿದರ್ಶನ. ಅವರು ಹೊರಗಿನ ಜಗತ್ತಿಗೆ ತೆರೆದುಕೊಂಡವರಲ್ಲ. ಆದರೆ ಪರಮೋನ್ನತ ಸಾಧನೆಯನ್ನು ಮಾಡಿದ್ದಾರೆ. ಶಿವಶರಣರು ಇದೇ ಮಾರ್ಗದಲ್ಲಿ ಪಯಣಿಸಿ ಅಗಾಧ ಆಧ್ಯಾತ್ಮ ಸಾಧನೆಗೈದಿದ್ದಾರೆ. ಸಾಮಾನ್ಯ ಮಾನವನು ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಹಿಂದೆ ಬಾಳೆ ಗಿಡವನ್ನು ನೆಡುತ್ತಿದ್ದರು, ಇದನ್ನೇ ಕದಲೀಮರವೆಂದೂ ಶಿವಶರಣರು ಕರೆದಿದ್ದಾರೆ. ಕದಲೀ ವನದಲ್ಲಿ ಅನೇಕ ಶಿವ ಶರಣರು ಆಧ್ಯಾತ್ಮಿಕ ಸಾರ್ಥಕ್ಯವನ್ನು ಅನುಭವಿಸಿದ್ದಾರೆ. ಕೈಲಾಸವನ್ನು ಹುಡುಕಿಕೊಂಡು ಹೋಗುವುದು ಕಷ್ಟ ಆದರೆ ಪ್ರತೀ ಮನೆಯನ್ನು ಕೈಲಾಸವನ್ನಾಗಿಸುವ ಮಾರ್ಗ ನಾವು ಕೈವಲ್ಯ ಅಥವಾ ಸರ್ವಜ್ಞತೆಯನ್ನು ಅರಿಯುವುದರಿಂದ ಸಾಧ್ಯವಾಗುತ್ತದೆ. ಅಂತಹುದೇ ಸಾಧನೆಯನ್ನು ಸಾಮಾನ್ಯ ಮಾನವನು ಶಿವಪೂಜೆಯಿಂದ ಸಾಧಿಸಬಹುದು.

ಶಿವನ ಮಹಾಲಿಂಗ ಪೂಜೆಯಲ್ಲಿ ಬಾಣಲಿಂಗ ಅಥವಾ ನರ್ಮದಾ ಲಿಂಗವು ಮುಖ್ಯವೆನಿಸುತ್ತದೆ. ಬಾಣ ಲಿಂಗದಲ್ಲಿ ಶಿವನಿಗೆ ಸ್ವಯಂ ಜೀವವಿರುತ್ತದೆ, ಈ ಲಿಂಗಕ್ಕೆ ಪ್ರಾಣ ಪ್ರತಿಷ್ಠೆಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಪ್ರತಿಷ್ಠೆಗೆ ನರ್ಮದಾ ಲಿಂಗ ಸೂಕ್ತ. ನರ್ಮದಾ ನದಿಯು ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿ ತನ್ನ ಗರ್ಭದಲ್ಲಿ ಶಿವನು ಮಗುವಾಗಿ ಹುಟ್ಟುವಂತೆ ಅಪೇಕ್ಷಿಸುತ್ತಾಳೆ. ಶಿವನು ತನ್ನ ಅಂಶವನ್ನು ನರ್ಮದಾ ನದಿಯಲ್ಲಿ ವೀರ್ಯದ ಸ್ವರೂಪದಲ್ಲಿ ಲೀನಗೊಳಿಸಿ ನರ್ಮದಾ ನದಿಯ ಒಡಲು ಸೇರುತ್ತಾನೆ. ಇಲ್ಲಿ ಉದ್ಭವವಾಗುವ ಲಿಂಗವನ್ನು ವೀರ್ಯಲಿಂಗ ಅಥವಾ ಬಾಣಲಿಂಗ ಎನ್ನಲಾಗುತ್ತದೆ. ಈ ಲಿಂಗವು ಸ್ವಾಭಾವಿಕವಾಗಿ ನರ್ಮದಾ ನದಿಯಲ್ಲಿ ಉದ್ಭವವಾಗುತ್ತದೆ. ಆ ಲಿಂಗಕ್ಕೆ ಹೊಳಪು ನೀಡಿದಾಗ ಶಿವನ ಇರುವಿಕೆಯ ಅನುಭೂತಿಯಾಗುತ್ತದೆ. ಕೆಲವು ಲಿಂಗಗಳಲ್ಲಿ ಚಂದ್ರಾಕಾರವಿದ್ದರೆ ಕೆಲವೊಂದರಲ್ಲಿ ಓಂಕಾರವಿರುವುದು ಕಂಡುಬರುತ್ತದೆ. ಶಂಕರಾಚಾರ್ಯರಿಗೆ ಜ್ಞಾನಪ್ರಾಪ್ತಿಯಾದ ಓಂಕಾರೇಶ್ವರ ದೇಗುಲದಲ್ಲೂ ಇದೇ ಲಿಂಗವಿದೆ. ನರ್ಮದಾ ಲಿಂಗವು ಜೀವಂತ ಶಿವಲಿಂಗವಾಗಿದೆ. ಬೇರೆ ಲಿಂಗಗಳಿಗೆ ಪ್ರಾಣಪ್ರತಿಷ್ಠೆ ಮಾಡಬೇಕಾಗಿರುತ್ತದೆ ಆದರೆ ನರ್ಮದಾ ಲಿಂಗ ಮತ್ತು ವಿಷ್ಣು ಸಾಲಿಗ್ರಾಮಕ್ಕೆ ಪ್ರಾಣಪ್ರತಿಷ್ಠೆ ಮಾಡುವ ಅವಶ್ಯಕತೆ ಇರುವುದಿಲ್ಲ. ಗಂಡಕೀ ನದಿ ಮಹಾವಿಷ್ಣುವಿನಲ್ಲಿ ತನ್ನ ಮಗನಾಗಿ ಹುಟ್ಟುವಂತೆ ಕೇಳಿಕೊಂಡಾಗ ವಿಷ್ಣು ಸಾಲಿಗ್ರಾಮ ಸ್ವರೂಪ ಪಡೆದು ಅವಳ ಕೋರಿಕೆಯನ್ನು ಈಡೇರಿಸುತ್ತಾನೆ. ಸಾವಿರ ಶಿವಲಿಂಗಗಳ ಶಕ್ತಿ ಒಂದು ನರ್ಮದಾ ಲಿಂಗಕ್ಕಿರುತ್ತದೆ ಅದೇ ರೀತಿ ಸಾವಿರ ನರ್ಮದಾ ಲಿಂಗಗಳ ಶಕ್ತಿ ಒಂದು ಸಾಲಿಗ್ರಾಮಕ್ಕಿರುತ್ತದೆ. ಸುದರ್ಶನ ಸಾಲಿಗ್ರಾಮವು ಗಂಡಕೀ ನದಿಯಲ್ಲಿ ಮಾತ್ರ ಸಿಗುವಂತಹುದ್ದಾಗಿದೆ. ನರ್ಮದೇಶ್ವರ ಲಿಂಗದೊಳಗೆ ನೀರಿನ ಅಂಶವಿರುತ್ತದೆ. ಒಂದು ಊರಿನಲ್ಲಿ ಶಿವಪ್ರತಿಷ್ಠೆ ಮಾಡಬೇಕು ಎಂದಿರುವವರು ಶಿವನ ಚೈತನ್ಯದ ಅನುಭೂತಿಯನ್ನು ಪಡೆಯಲು ನರ್ಮದಾ ಲಿಂಗವನ್ನು ಪ್ರತಿಷ್ಠಾಪಿಸಬಹುದು. ಬೇರೆ ಎಲ್ಲಾ ವಿಗ್ರಹಗಳಿಗೂ 12 ವರ್ಷದ ನಂತರ ಬ್ರಹ್ಮ ಕಲಶಾಭಿಶೇಕವಾಗಬೇಕಿರುತ್ತದೆ. ಆದರೆ ನರ್ಮದಾ ಲಿಂಗಕ್ಕೆ ಇದರ ಅವಶ್ಯಕತೆಯಿರುವುದಿಲ್ಲ. ನರ್ಮದೆಯ ತಪಸ್ಸು, ಶಿವನ ಅನುಗ್ರಹ ಮತ್ತು ಸೂರ್ಯನ ಚೈತನ್ಯದೊಂದಿಗೆ ನರ್ಮದಾ ಲಿಂಗವೂ ಸದಾ ಜೀವಂತವಾಗಿರುತ್ತದೆ. ಶಿವಪ್ರತಿಷ್ಠೆ ಮಾಡಲು ಇಚ್ಛಿಸುವವರು ನರ್ಮದಾ ಲಿಂಗವನ್ನು ಪ್ರತಿಷ್ಠಾಪನೆ ಮಾಡುವುದಾದರೆ ಆಶ್ರಮವನ್ನು ಸಂಪರ್ಕಿಸಿದರೆ ಆ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.