You are currently viewing ಶುಭಶಕುನ, ಅಪಶಕುನ ಮತ್ತು ಮೂಢನಂಬಿಕೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಶುಭಶಕುನ, ಅಪಶಕುನ ಮತ್ತು ಮೂಢನಂಬಿಕೆ | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಶಕುನ ಎನ್ನುವುದು ಸಂಕೇತ ಎಂಬ ಅರ್ಥವನ್ನು ನೀಡುತ್ತದೆ. ಶಾಸ್ತ್ರದ ಪ್ರಕಾರ ಇದನ್ನು ಶಬ್ದ ವಿಜ್ಞಾನ ಎನ್ನಲಾಗುತ್ತದೆ. ಶಾಸ್ತ್ರಾಧ್ಯಯನದ ಮೂಲಕ ಶಕುನಶಾಸ್ತ್ರವನ್ನು ಅಧ್ಯಯಿಸುವವರಿಗೆ ಅನುಷ್ಠಾನಕ್ಕೆ ಕೆಲ ವಿಧಾನಗಳಿವೆ. ಆದರೆ ಪ್ರಸ್ತುತ ಮೌಢ್ಯದ ಶಕುನಗಳಿಗೆ ಹೆಚ್ಚಿನ ಬೆಲೆ ತೆರಲಾಗುತ್ತಿರುವುದು ವಿಷಾದಕರ. ಹಲ್ಲಿ ಲೊಚಗುಟ್ಟುವುದು ಶಕುನದ ಸಂಕೇತವಲ್ಲ. ಅದು ಅದರ ಸಂವಹನದ ಸಾಮಾನ್ಯ ಪ್ರಕ್ರಿಯೆ. ಇದು ಮನುಷ್ಯರಲ್ಲೂ ನಡೆಯುವ ಒಂದು ಸಾಮಾನ್ಯ ಕ್ರಿಯೆ. ಶಕುನ ಶಾಸ್ತ್ರವನ್ನು ಶಬ್ದಾಧ್ಯಯನ ಎಂದೂ ಕರೆಯಬಹುದು. ಜಗತ್ತು ಅಕ್ಷರ, ಶಬ್ದ ಮತ್ತು ಅನಂತದಲ್ಲಿ ನೆಲೆಯಾಗಿದೆ. ಶಬ್ದವು ಅನಂತದ ಸಹಾಯದಿಂದ ಹುಟ್ಟುತ್ತದೆ. ಪಂಚಭೂತಗಳಲ್ಲಿ ತಿಳಿಸಲ್ಪಟ್ಟಿರುವ ಆಕಾಶ ತತ್ವವು ಪಂಚಭೂತಗಳಲ್ಲಿ ಅತ್ಯಂತ ಶ್ರೇಷ್ಠವಾದುದ್ದಾಗಿದೆ. ಇದಕ್ಕೆ ಲಯದ ನಿಯಂತ್ರಣವಿಲ್ಲ. ಅನಂತತೆಯು ಪರಬ್ರಹ್ಮ ವಸ್ತುವಿನ ಸ್ವರೂಪ. ಇದನ್ನೇ ವೇದ ಪುರಾಣಗಳಲ್ಲಿ ಚಿದಾಕಾಶ ಎನ್ನುತ್ತಾರೆ.

ಅಷ್ಟಮಂಗಲ ಎನ್ನುವುದು ಶಕುನ ಶಾಸ್ತ್ರದಲ್ಲಿ ಬರುವ ಶ್ರೇಷ್ಠವಾದ ವಿದ್ಯೆ. ಇಂತಹ ವಿದ್ಯೆಯನ್ನು ಸರಿಯಾಗಿ ಅಧ್ಯಯಿಸದೆ ಅನುಷ್ಠಾನಕ್ಕೆ ತರುತ್ತಿರುವುದು ವಿಷಾದನೀಯ. ಜ್ಯೋತಿಃಶಾಸ್ತ್ರವೂ ಇದೇ ರೀತಿಯಾದ ಶ್ರೇಷ್ಠ ವಿದ್ಯೆಯಾಗಿದೆ. ಶಂಖ, ಡಮರು ಮೊದಲಾದ ಉಪಕರಣಗಳ ನಾದವು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ. ಅನೇಕ ಧರ್ಮಶಾಸ್ತ್ರಗಳು ದಶನಾದಗಳ ಉಲ್ಲೇಖವನ್ನು ಮಾಡಿದೆ. ಇವು ನಮ್ಮ ಶರೀರವನ್ನು ಶುದ್ಧೀಕರಣ ಮಾಡುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಶಬ್ದದ ಆರಾಧನೆಯು ಜಗತ್ತಿನಾದ್ಯಂತ ವ್ಯಾಪಿಸಿದೆ. ಲಯಬದ್ಧ ಸಂಗೀತವು ಶರೀರದ ಚಕ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಾನಸಿಕ ಒತ್ತಡ ಅನುಭವಿಸುವವರು ಸಂಗೀತ ಅಭ್ಯಾಸ ಮಾಡುವುದು ಒಳಿತು.

ಒಂಟಿ ಬ್ರಾಹ್ಮಣನನ್ನು ನೋಡಿದರೆ ಕೆಟ್ಟದಾಗುತ್ತದೆ ಎಂಬ ಮೂಢನಂಬಿಕೆಯೊಂದಿದೆ. ಶ್ರದ್ಧೆಯಿಂದ ದೇವರ ಪೂಜೆ ಮಾಡುವ ಬ್ರಾಹ್ಮಣನನ್ನು ನೋಡಿದರೆ ಕೆಟ್ಟದಾಗಲು ಹೇಗೆ ಸಾಧ್ಯ? ಅದೇ ವ್ಯಕ್ತಿ ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಅಂಟದ ಅಪಶಕುನ ದಾರಿಯಲ್ಲಿ ಒಬ್ಬಂಟಿಯಾಗಿ ಕಾಣಿಸಿಕೊಂಡರೆ ಹೇಗೆ ವಕ್ಕರಿಸುತ್ತದೆ. ವಿಧವೆ ಅಡ್ಡಸಿಕ್ಕರೆ ಅಪಶಕುನ ಎನ್ನುತ್ತಾರೆ. ಯಾವ ಹೆಣ್ಣೂ ವಿಧವೆಯಾಗಬೇಕೆಂದು ಬೇಡಿಕೊಳ್ಳುವುದಿಲ್ಲ. ಅದು ಆಕೆಯ ವಿಧಿಯಾಗಿರುತ್ತದೆ. ಆಕೆಯ ಅನಿವಾರ್ಯತೆಗೆ ದುಡಿಯ ಬೇಕಾಗುತ್ತದೆ. ಎಷ್ಟೋ ವಿಧವೆಯರು ಅನೇಕ ರಂಗಗಳಲ್ಲಿ ಕೆಲಸ ಮಾಡುತ್ತಾರೆ. ಅಂತಹವರ ಬಳಿ ವ್ಯವಹರಿಸದೆ ಇರಲಾಗುತ್ತದೆಯೇ.
ವೈಧವ್ಯದ ನಂತರ ಕುಂಕುಮ ಹಚ್ಚಬಾರದು, ಬಳೆ ಹಾಕಬಾರದು ಎನ್ನುವವರಿಗೊಂದು ನೇರ ಪ್ರಶ್ನೆ! ಹೆಣಣ್ಣೊಬ್ಬಳು ಗಂಡ ಬಂದ ನಂತರ ಇವೆಲ್ಲವನ್ನೂ ಮಾಡುತ್ತಿದ್ದಳೇ? ಹೆಣ್ಣು ಹುಟ್ಟಿನಿಂದಲೇ ಇವೆಲ್ಲವನ್ನೂ ಧರಿಸುತ್ತಿದ್ದಳು. ಆಕೆಯ ಗಂಡ ತೀರಿಹೋದ ನಂತರ ಅದನ್ನು ಬಿಚ್ಚಿಡ ಬೇಕೆನ್ನುವುದು ಎಷ್ಟು ಸರಿ? ರಾಮಕೃಷ್ಣ ಪರಮಹಂಸರು ಇದನ್ನು ವಿರೋಧಿಸಿದ ಪರಮಜ್ಞಾನಿಗಳಾಗಿದ್ದಾರೆ.

ಸುಮಂಗಲೀ ಎನ್ನುವುದು ಗುಣದಿಂದ ಸಂಪನ್ನವಾಗುವ ಪದವಿಯೇ ಹೊರತು ತಾಳಿಯಿಂದಲ್ಲ. ಇತರರಿಗೆ ಒಳ್ಳೆಯದನ್ನು ಬಯಸುವವಳು ಸದಾ ಸುಮಂಗಲಿಯೇ ಆಗಿರುತ್ತಾಳೆ. ವಕ್ರ ಬುದ್ಧಿಯನ್ನು ಅಳವಡಿಸಿಕೊಂಡು ಸುಮಂಗಲೀ ಎನಿಸಿಕೊಂಡರೂ ಅದಕ್ಕೆ ಫಲವಿಲ್ಲ. ಸನಾತನ ಧರ್ಮವು ಹೆಣ್ತನಕ್ಕೆ ಮಹಾ ಗೌರವದ ಸ್ಥಾನವನ್ನು ನೀಡಿದೆ. ಶಕುನ ಶಾಸ್ತ್ರ ಎಂಬ ವಿದ್ಯೆಯೊಂದಿದೆ, ಆದರೆ ಇನ್ನುಳಿದ ಅಪಶಕುನದ ಮಾತುಗಳು ಅಸಂಬದ್ಧವಾಗಿದೆ. ಪ್ರತಿಯೊಂದು ಪ್ರಶ್ನೆಗೂ ಪ್ರಕೃತಿ ಉತ್ತರವನ್ನು ನೀಡುತ್ತದೆ. ಅದನ್ನು ಅರ್ಥಮಾಡಿಕೊಂಡಾಗ ಪ್ರಕೃತಿಯ ಪ್ರತೀ ವ್ಯತ್ಯಾಸವೂ ನಮ್ಮ ಅರಿವಿಗೆ ಬರುತ್ತದೆ.