You are currently viewing ಶ್ರೀ ಚಕ್ರ ಉಪಾಸನೆಯಲ್ಲಿ ದೇವಿ ಆರಾಧನೆ | ಆಧ್ಯಾತ್ಮ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

ಶ್ರೀ ಚಕ್ರ ಉಪಾಸನೆಯಲ್ಲಿ ದೇವಿ ಆರಾಧನೆ | ಆಧ್ಯಾತ್ಮ ಅವಲೋಕನ | ಅವಧೂತ ಶ್ರೀ ವಿನಯ್ ಗುರೂಜಿ

  • Post author:
  • Post category:article

ಶ್ರೀ ಚಕ್ರ ಪೂಜೆಯ ಬಗ್ಗೆ ಮಾಹಿತಿ ತಿಳಿಯುವ ಮುನ್ನ ಚಕ್ರ ಎನ್ನುವ ಪರಿಕಲ್ಪನೆಯನ್ನು ಪರಿಗಣಿಸಿದರೆ, ಕಾಲವನ್ನು ಕಾಲಚಕ್ರ ಎಂದು ಕರೆಯಲಾಗುತ್ತದೆ. ಕಾಲ ನಿರ್ಣಯವು ಆ ಚಕ್ರದ ಮೇಲೆ ಅವಲಂಬಿತವಾಗಿದೆ. ಶ್ರೀ ಯಂತ್ರವು ಶಾಕ್ತ ಉಪಾಸನೆಯಲ್ಲಿ ದೇವಿಯನ್ನು ನಿರ್ಗುಣ ನಿರಾಕಾರ ರೂಪದಲ್ಲಿ ಮಾಡುವ ಆರಾಧನೆಯಾಗಿದೆ. ದೇವಿಗೆ ಲಲಿತಾ ರೂಪವನ್ನು ಕೊಟ್ಟಾಗ ಅದು ಸಗುಣೋಪಾಸನೆಯಾಗುತ್ತದೆ. ಶ್ರೀ ಯಂತ್ರದ ಮೂಲಕ ಶಕ್ತಿಯನ್ನು ನಿರ್ಗುಣ ಆಕಾರದಲ್ಲಿ ಆರಾಧಿಸುವ ವಿಧಾನವೇ ಶ್ರೀ ಚಕ್ರ ಪೂಜೆ. ಈ ಕಾರಣಕ್ಕೆ ಆಕೆಯನ್ನು ಯಂತ್ರಾತ್ಮಿಕೆ ಎನ್ನುತ್ತೇವೆ. ದೇವಿಯು ಯಂತ್ರ ರೂಪದಲ್ಲಿ ಪೂಜಿಸಲ್ಪಡುವುದರಿಂದ ಇದಕ್ಕೆ ಶ್ರೀ ಯಂತ್ರ ಪೂಜೆ ಎಂಬ ಹೆಸರು ಬಂದಿರುವುದು.

ದೇವಿ ಬೆಳಕಿನ ಸ್ವರೂಪವಾಗಿದ್ದಾಳೆ. ಬೆಳಕು ಹಿಡಿಯಲು ಸಿಗದಂತಹಾ ವಸ್ತು. ಸರ್ವವನ್ನೂ ವ್ಯಾಪಿಸಿರುವ ಈ ಬೆಳಕು ಆರಾಧನಾ ರೂಪ ಪಡೆಯುವಾಗ ದೇವಿಯ ಸ್ವರೂಪ ಧರಿಸುತ್ತದೆ. ಸ್ವರೂಪ ರಹಿತವಾದ ಬೆಳಕನ್ನು ಸ್ತ್ರೀ ರೂಪದಲ್ಲಿ ಆರಾಧಿಸಿದಾಗ ಆಕೆ ಲಲಿತಾ ತ್ರಿಪುರ ಸುಂದರಿಯಾಗಿ ಬದಲಾಗುತ್ತಾಳೆ. ಇದು ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ವತಿ ಮತ್ತು ತ್ರಿಮೂರ್ತಿಗಳನ್ನು ಒಳಗೊಂಡಿರುವ ಜ್ಯೋತಿರ್ಮಯ ಸ್ಥಿತಿಯಾಗಿದೆ. ಸ್ವರ್ಣರೇಖೆಯಾಗಿರುವ ಶ್ರೀಯಂತ್ರವು ಕೊಲ್ಲೂರಿನಲ್ಲಿ ಸ್ವಯಂಭೂವಾಗಿ ನೆಲೆಸಿದೆ. ಶಂಕರಾಚಾರ್ಯರು ಕೊಲ್ಲೂರು, ಕಾಮಾಕ್ಷಿ, ಶೃಂಗೇರಿ ಸೇರಿದಂತೆ ಹಲವೆಡೆಗಳಲ್ಲಿ ಶ್ರೀ ಯಂತ್ರವನ್ನು ಪ್ರತಿಷ್ಠಾಪಿಸಿ ಆರಾಧಿಸಿದ್ದಾರೆ. ದೇವಿಯು ಶ್ರೀ ಚಕ್ರ ಮಧ್ಯ ಬಿಂದು ನಿಲಯೆಯಾಗಿ ಆರಾಧಿಸಲ್ಪಡುತ್ತಾಳೆ. ಇಲ್ಲಿ ಬಿಂದುವು ನಿರ್ಗುಣ ಸ್ವರೂಪವಾಗಿದೆ. ದೇವಿಯ ಹೆಬ್ಬೆಟ್ಟಿನಿಂದ ಅಥವಾ ಅಂಗುಷ್ಠ ಪ್ರಾಣದಿಂದ ಶ್ರೀ ಯಂತ್ರ ಉದ್ಭವವಾಯಿತು ಎಂಬ ಉಲ್ಲೇಖವಿದೆ. ಲೋಪಾಮುದ್ರೆಯು ಶ್ರೀ ಚಕ್ರ ಪೂಜಾ ವಿಧಾನವನ್ನು ಮೊದಲು ಆರಾಧಿಸುತ್ತಾಳೆ. ಆಕೆಯಿಂದ ಅಗಸ್ತ್ಯರಿಗೆ ಈ ಪೂಜೆಯ ಜ್ಞಾನ ಪ್ರಾಪ್ತಿಯಾಗುತ್ತದೆ. ಖಡ್ಗಮಾಲಾ ಸ್ತೋತ್ರದಲ್ಲೂ ಲೋಪಾಮುದ್ರಮಯೀ, ಅಗಸ್ತ್ಯಮಯಿ ಎಂಬ ಉಲ್ಲೇಖಗಳಿವೆ. ಹಯಗ್ರೀವನಿಂದ ಲೋಪಾಮುದ್ರೆ ಮತ್ತು ಅಗಸ್ತ್ಯರು ಈ ದಿವ್ಯಜ್ಞಾನವನ್ನು ಪಡೆಯುತ್ತಾರೆ. ಮುಂದೆ ಅಗಸ್ತ್ಯರಿಂದ ಲೋಕಕ್ಕೆ ಈ ಪೂಜೆಯ ಅರಿವು ಸಿಗುತ್ತದೆ.

ಲಲಿತಾ ಸಹಸ್ರನಾಮಕ್ಕೆ ಭಾಷ್ಯವನ್ನು ಭಗವತ್ಪಾದರು ಬರೆಯುತ್ತಾರೆ. ನಮ್ಮ ದೇಹದಲ್ಲಿರುವ ಸಹಸ್ರಾರದಿಂದ ಮೂಲಾಧಾರ ಚಕ್ರದವರೆಗೆ ಎಲ್ಲಾ ಚಕ್ರಗಳು ಒಂದಾದರೆ ಶ್ರೀ ಚಕ್ರ ಎನಿಸಿಕೊಳ್ಳುತ್ತದೆ. ಲಲಿತಾ ಸಹಸ್ರನಾಮವು ಇದರ ಆಚರಣಾ ವಿಧಾನವನ್ನು ತಿಳಿಸುತ್ತದೆ. ಆಕೆ ದಂಡನಾಥ ಪುರಸ್ಕೃತೆ ಅಥವಾ ಸಾಕ್ಷಾತ್ ಯಮನಿಂದಲೇ ಪೂಜಿಸಲ್ಪಡುವವಳಾಗಿದ್ದಾಳೆ. ಶ್ರೀ ಚಕ್ರದ ಮಧ್ಯ ಬಿಂದುವಿನಲ್ಲಿ ಶಿವ ಮತ್ತು ಶಕ್ತಿ ಒಂದಾಗುತ್ತಾರೆ. ಇಲ್ಲಿ ಗುಣ ಬೇಧ ನಾಶವಾಗಿ ಬೆಳಕೊಂದೇ ಉಳಿಯುತ್ತದೆ. ಶಕ್ತಿ ಉಪಾಸನೆಯ ಪ್ರಕಾರ ಶ್ರೀ ಯಂತ್ರವನ್ನು ಪರಬ್ರಹ್ಮ ಉಪಾಸನೆ ಎನ್ನಲಾಗುತ್ತದೆ. ಶ್ರೀ ಚಕ್ರ ಉಪಾಸನೆಯಿಂದ ಜಗತ್ತಿನಲ್ಲಿರುವ ಎಲ್ಲಾ ದೈವ ಚೈತನ್ಯಗಳನ್ನು ಒಂದೇ ಯಂತ್ರದ ಮೂಲಕ ಆರಾಧಿಸಬಹುದು. ಈ ಪೂಜೆಯನ್ನು ಮಾಡುವುದರಿಂದ ಸರ್ವದೇವತೆಗಳನ್ನು ಏಕಕಾಲದಲ್ಲಿ ಪೂಜಿಸಬಹುದು. ಈ ಕಾರಣಕ್ಕೆ ಶ್ರೀ ಚಕ್ರ ಉಪಾಸನೆ ದೇವಿ ಉಪಾಸನೆಯಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಪುರಾಣದಲ್ಲಿ ಉಲ್ಲೇಖಿತವಾದ 14 ಭುವನಗಳ ಫಲವನ್ನು ಶ್ರೀ ಚಕ್ರ ಪೂಜೆಯು ಒದಗಿಸುತ್ತದೆ. ಲಲಿತೆಯು ದಕ್ಷಿಣಾಮೂರ್ತಿ ಸ್ವರೂಪಿಣಿಯಾಗಿರುವುದರಿಂದ ಆಕೆ ಗುರು ಮಂಡಲಕ್ಕೇ ದೇವತೆಯಾಗಿದ್ದಾಳೆ. ಇಡೀ ಜಗತ್ತಿನ ರಹಸ್ಯ ತಿಳಿದಿರುವ ಮಹಾಮಾತೆಯು ಆಕೆಯೇ. ಜಗತ್ತಿನ ತಾಯಿಯನ್ನು ಶ್ರೀ ಯಂತ್ರದ ಮೂಲಕ ಪೂಜಿಸಿದರೆ ಶ್ರೇಷ್ಠ ಫಲ ಪ್ರಾಪ್ತವಾಗುತ್ತದೆ.