You are currently viewing ಸನಾತನ ಧರ್ಮದ ವಿರುದ್ಧವಿರುವ ಪ್ರತಿಯೊಂದು ಪ್ರಶ್ನೆಗೂ ಅವಧೂತರ ಸ್ಪಷ್ಟ ಉತ್ತರ! | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್‌ ಗುರೂಜಿ

ಸನಾತನ ಧರ್ಮದ ವಿರುದ್ಧವಿರುವ ಪ್ರತಿಯೊಂದು ಪ್ರಶ್ನೆಗೂ ಅವಧೂತರ ಸ್ಪಷ್ಟ ಉತ್ತರ! | ಅವಧೂತ ಅವಲೋಕನ | ಅವಧೂತ ಶ್ರೀ ವಿನಯ್‌ ಗುರೂಜಿ

ಸನಾತನ ಧರ್ಮ ಎಂದರೇನು ಎಂದು ಅರಿಯುವ ಮುನ್ನ ಧರ್ಮದ ವ್ಯಾಖ್ಯಾನವನ್ನು ತಿಳಿಯಬೇಕು. ದಯೆಯ ಮರ್ಮವನ್ನು ಅರಿತು ಬದುಕುವ ಜೀವನ ಶೈಲಿಯೇ ಧರ್ಮವಾಗಿದೆ. ಸಕಲ ಚರಾಚರ ಜೀವಿಗಳೂ ಇತರ ಜೀವಾತ್ಮಗಳನ್ನು ಹಿಂಸಿಸದೆ ಸಮತೋಲನದಲ್ಲಿ ಬದುಕುವ ಪ್ರಕ್ರಿಯೆಯನ್ನೂ ಧರ್ಮ ಎಂದು ಪರಿಗಣಿಸಬಹುದು. ಪ್ರತಿಯೊಂದು ಧರ್ಮಕ್ಕೂ ಹುಟ್ಟಿದೆ, ಪ್ರತಿಯೊಂದು ಧರ್ಮಗ್ರಂಥಕ್ಕೂ ಒಬ್ಬ ಗ್ರಂಥಕಾರರಿರುತ್ತಾರೆ. ಕುರಾನ್‌ ಎನ್ನುವುದು ಪ್ರವಾದಿ ಮುಹಮ್ಮದರಿಗೆ ಪರಬ್ರಹ್ಮ ಸ್ವರೂಪವಾದ ಅಲ್ಲಾಹುವಿನಿಂದ ದೊರೆತ ಚಿಂತನೆಯಾಗಿದೆ. ಪವಿತ್ರ ಬೈಬಲ್‌ ಎನ್ನುವುದು ಏಸುಕ್ರಿಸ್ತನಿಗೆ ತನ್ನ ತಂದೆಯಿಂದ ಅಂದರೆ ಭಗವಂತನಿಂದ ಒಲಿದ ಸಿದ್ಧಾಂತವಾಗಿದೆ. ಬಸವಣ್ಣನ ವಚನಗಳು ಅವರ ಅನುಭವ ಸಾರದಿಂದ ಸೃಷ್ಟಿ ಪಡೆದಿದೆ. ಭಗವದ್ಗೀತೆಯು ಕೃಷ್ಣನಿಂದ ಅರ್ಜುನನಿಗೆ ನಿಮಿತ್ತವಾಗಿ ರಚಿಸಲ್ಪಟ್ಟ ಧರ್ಮ ಗ್ರಂಥವಾಗಿದೆ. ಹೀಗೇ ಇನ್ನೂ ಅನೇಕ ಧರ್ಮ ಗ್ರಂಥಗಳಿಗೆ ಕಾಲಮಿತಿ ಮತ್ತು ಗ್ರಂಥ ರಚನಾಕಾರರಿದ್ದಾರೆ. ಪ್ರತಿಯೊಂದು ಧರ್ಮಗ್ರಂಥಗಳು ಒಂದೊಂದು ಸಿದ್ಧಾಂತವನ್ನು ಸಾರುತ್ತದೆ. ಪರಬ್ರಹ್ಮ ಎನ್ನುವ ಬೆಳಕಿನ ಸಹಾಯದಿಂದ ಪ್ರಪಂಚವನ್ನು ಕತ್ತಲೆಯಿಂದ ಮುಕ್ತಗೊಳಿಸುವ ಸಲುವಾಗಿ ಆಯಾಯ ಕಾಲ ಸನ್ನಿವೇಶಕ್ಕೆ ಅನುಗುಣವಾಗಿ ಒಂದೊಂದು ಸಿದ್ಧಾಂತವನ್ನು ಪುಸ್ತಕ ರೂಪದಲ್ಲಿ ಧರ್ಮಗ್ರಂಥಗಳಾಗಿ ಪರಿಚಯಿಸಲಾಯಿತು. ಈ ಎಲ್ಲವೂ ಮನುಷ್ಯರ ಒಳಿತಿಗೆ ಮುಡಿಪಾಗಿದೆ. ಯಾವ ಧರ್ಮದ ಮೂಲವನ್ನು ಇಲ್ಲಿಯವರೆಗೂ ಕಂಡು ಹುಡುಕಲು ಸಾಧ್ಯವಾಗಿಲ್ಲವೋ ಅದೇ ಸನಾತನ ಧರ್ಮ ಎನಿಸಿಕೊಂಡಿದೆ. ಮಾನವೀಯತೆಗೆ ಯಾವುದೇ ಬಗೆಯ ಧರ್ಮವೂ ಅಡ್ಡಿಯಾಗಿಲ್ಲ. ಯಾವ ಶಕ್ತಿಯು ಆಂತರಿಕವಾಗಿ ಇತರರಿಗೆ ಒಳ್ಳೆಯದನ್ನು ಬಯಸಲು ಪ್ರೇರಣೆಯನ್ನು ನೀಡುತ್ತಿದೆ ಅದುವೇ ಸನಾತನ ಧರ್ಮವಾಗಿದೆ. ಸನಾತನ ಧರ್ಮದ ತಳಹದಿ ಗಟ್ಟಿಯಾಗಿ ನಿಂತಿರುವುದು ಮನುಷ್ಯತ್ವದ ತಳಹದಿಯ ಮೇಲೆ. ಪ್ರಕೃತಿಯ ಮೂಲ ಭಾಷೆ ಮೌನ ಮತ್ತು ಅಹಿಂಸೆಯೇ ಆಗಿದೆ. ಓಂ ಸನಾತನದ ಸ್ವರೂಪವಾಗಿದೆ, ಇದರ ಹುಟ್ಟಿನ ಬಗ್ಗೆ ಯಾರಿಗೂ ತಿಳಿದಿಲ್ಲ. ಓಂ ಅನ್ನು ಬಿಡಿಸಿದಾಗ ಮೂರಕ್ಷರಗಳು ತೆರೆದುಕೊಳ್ಳುತ್ತದೆ. ಇದೇ ಮೂರಕ್ಷರಗಳು ಪ್ರತಿಯೊಂದು ಧರ್ಮದಲ್ಲೂ ಪ್ರಜ್ವಲಿಸುತ್ತದೆ.

ಕೈಲಾಸ ಪರ್ವತಕ್ಕೆ ಸರ್ವ ಧರ್ಮದ ಆಚರಣೆ ಮಾಡುವವರು, ಪ್ರಕೃತಿಯನ್ನು ಆಸ್ವಾದಿಸುವವರು ಭೇಟಿ ನೀಡುತ್ತಾರೆ, ಆದರೆ ಇದರಿಂದ ಪರ್ವತಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ದೇವರು ಕೈಲಾಸವಿದ್ದಂತೆ, ಧರ್ಮಗಳು ಅವನನ್ನು ಸೇರುವ ದಾರಿಗಳಷ್ಟೇ. ಕೈಲಾಸ ಪರ್ವತದಲ್ಲಿ ಪ್ರಕೃತಿ ದತ್ತವಾಗಿ ಓಂಕಾರದ ನಾದ ಕೇಳುತ್ತದೆ. ಸೌರಮಂಡಲದ ಧ್ವನಿಯನ್ನು ಅಧ್ಯಯಿಸುವಾಗ ವಿಜ್ಞಾನಿಗಳಿಗೆ ಓಂಕಾರದ ನಾದ ಕೇಳುತ್ತದೆ. ಯಾರು ಒಪ್ಪಿದರೂ ಒಪ್ಪದೇ ಇದ್ದರೂ ನಮ್ಮ ಉಸಿರಾಟವು ಓಂಕಾರ ಸ್ವರೂದಲ್ಲೇ ಇದೆ. ತ್ರಿಕಾಲದಲ್ಲಿ ವರ್ಣ, ಜಾತಿ, ಧರ್ಮ, ಕಾಲದ ಮಿತಿಯನ್ನು ಮೀರಿ ಸೃಷ್ಠಿಯ ನಾದವಾಗಿ ನಿಂತಿದೆಯೋ ಅದೇ ಓಂಕಾರ ಎನಿಸಿಕೊಳ್ಳುತ್ತದೆ. ಜ್ಞಾನದ ಸಾಧ್ಯತೆಗಳನ್ನು ದಾಟಿದ ಸ್ಥಿತಿಯನ್ನು ಮುಟ್ಟುವ ಮಾಧ್ಯಮವೇ ಸನಾತನ. ಪ್ರಸ್ತುತ ಜಾತಿ, ಧರ್ಮ, ಸಿದ್ಧಾಂತಗಳ ನಡುವೆ ಸಂಘರ್ಷಗಳು ನಡೆಯುತ್ತಿದೆ. ಮೋಕ್ಷವನ್ನು ತಲುಪಲು ಎಲ್ಲಾ ಧರ್ಮಗ್ರಂಥಗಳೂ ತನ್ನದೇ ಆದ ದಾರಿಯನ್ನು ತೋರಿಸುತ್ತದೆ, ಆದರೆ ಮೋಕ್ಷದ ಬಿಂದುವನ್ನು ತಲುಪಿದ ಬಳಿಕ ಎಲ್ಲವೂ ಒಂದೇ ಆಗುತ್ತದೆ. ಈ ವಿಚಾರವನ್ನು ಅರಿಯದವನು ಸಿದ್ಧಾಂತಗಳ ನಡುವೆ ತಾರತಮ್ಯವನ್ನು ಮಾಡಿ ಧರ್ಮ ಸಂಘರ್ಷಕ್ಕೆ ಕಾರಣನಾಗುತ್ತಾನೆ. ಯುವಕರು ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಇಟ್ಟುಕೊಂಡು ಬೇಳೆಬೇಯಿಸುವವರ ದಾಳಕ್ಕೆ ಬೀಳಬಾರದು. ಪ್ರಕೃತಿಯು ಎಂದಿಗೂ ಧರ್ಮದ ಆಧಾರದಲ್ಲಿ ಮನುಷ್ಯನನ್ನು ಬೇರ್ಪಡಿಸಿಲ್ಲ.

ಸನಾತನ ಧರ್ಮದಲ್ಲಿ ಬೇಧ ಭಾವವಿದೆ ಎನ್ನುವ ಭಾವಕ್ಕೆ ಅರ್ಥವಿಲ್ಲ. ಹೆಣ್ಣಿನ ಶೋಷಣೆಯೂ ತಾರತಮ್ಯಕ್ಕೆ ಸಂಬಂಧಿಸಿದೆ. ಸನಾತನ ಧರ್ಮದ ಪ್ರಮುಖ ಧರ್ಮಗ್ರಂಥಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ರಾಮಾಯಾಣವು ಸ್ತ್ರೀ ರಕ್ಷಣೆಯ ಕಾರಣಕ್ಕಾಗಿಯೇ ಸಂಭವಿಸಿತ್ತು. ಸ್ತ್ರೀ ಕುಲದ ಪಾತಿವ್ರತ್ಯಕ್ಕೆ ತೊಂದರೆಯಾದಾಗ ಸಾಕ್ಷಾತ್‌ ಭಗವಂತನೇ ಅವತಾರವೆತ್ತಿ ಆಕೆಯನ್ನು ಸಂರಕ್ಷಿಸುತ್ತಾನೆ ಎನ್ನುವುದನ್ನು ರಾಮಾಯಣ ನಿರೂಪಿಸಿತ್ತು. ಮಹಾಭಾರತ ಯುದ್ಧವು ಸ್ತ್ರೀಯೊಬ್ಬಳ ಅವಮಾನದ ವಿರುದ್ಧದ ಪ್ರತಿಕಾರವೇ ಆಗಿದೆ. ಹೆಣ್ಣೊಬ್ಬಳು ನಿರ್ಭಯವಾಗಿ ಮಧ್ಯರಾತ್ರಿಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಬೇಕೆಂಬ ಕನಸನ್ನು ಮಹಾತ್ಮಾ ಗಾಂಧೀಜಿ ಹೊಂದಿದ್ದರು. ಈ ಘಟನೆಗಳು ಸನಾತನ ಧರ್ಮ ಹೆಣ್ಣಿನ ಶೋಷಣೆಯ ವಿರುದ್ಧವಿದೆ ಎನ್ನುವುದನ್ನು ನಿರೂಪಿಸುತ್ತದೆ. ಸನಾತನ ಧರ್ಮದಲ್ಲಿ ಜಾತೀಯತೆ ಇದೆ ಎನ್ನುವ ಇನ್ನೊಂದು ವಾದವಿದೆ. ಆದರೆ ಮಹಾಶಿವನು ಯಾವ ಜಾತಿ ಎಂದು ಯಾರಿಗೂ ತಿಳಿದಿಲ್ಲ. ಶಿವ ಬ್ರಹ್ಮೋಪವೀತವನ್ನು ಧಾರಣೆ ಮಾಡಿ ಸ್ಮಶಾನದಲ್ಲಿರುತ್ತಾನೆ. ಆತ ಉಜ್ಜೈನಿಯಲ್ಲಿ ಶವ ಭಸ್ಮ ಧಾರಣೆ ಮಾಡುತ್ತಾನೆ, ಕಾಲಭೈರವ ರೂಪದಲ್ಲಿ ಮಧ್ಯ ಸ್ವೀಕಾರ ಮಾಡುತ್ತಾನೆ. ಅದೇ ಪರಮೇಶ್ವರ ಧರ್ಮಸ್ಥಳದಲ್ಲಿ ಸಾತ್ವಿಕ ಪೂಜೆಯನ್ನು ಪಡೆಯುತ್ತಾನೆ. ಹಾಗಾದರೆ ಶಿವನ ಜಾತಿ ಮತ್ತು ಆಹಾರವೇನು? ಹಾವನ್ನು ಕೊರಳಿಗೆ ಸುತ್ತಿಕೊಂಡು ವಿಚಿತ್ರವಾಗಿ ಕಂಡರೂ ಶಿವ ಮಹಾಜ್ಞಾನಿ. ಅಪವಿತ್ರವೆನಿಸಿದ ವಸ್ತುಗಳನ್ನು ಧಾರಣೆ ಮಾಡಿದರೂ ಸರ್ವ ಪವಿತ್ರವಾದ ಗಂಗೆಯನ್ನು ಶಿವ ತನ್ನ ಜಠೆಯಲ್ಲಿರಿಸಿದ್ದಾನೆ. ಪರಮೇಶ್ವರನು ಪಾರ್ವತಿಗೆ ಅರ್ಧಾಂಗವನ್ನೇ ನೀಡಿದ್ದಾನೆ. ಮಹಾವಿಷ್ಣುವು ತನ್ನ ಹೆಂಡತಿಗೆ ವಕ್ಷಸ್ಥಳದಲ್ಲಿ ಜಾಗವನ್ನು ಕರುಣಿಸಿದ್ದಾನೆ.

ಸನಾತನ ಧರ್ಮದಲ್ಲಿ ಜಾತಿಯನ್ನು ಪ್ರಮುಖವಾಗಿ ಪರಿಗಣಿಸುವವರು ಮಹರ್ಷಿಗಳಾದ ವ್ಯಾಸ ವಾಲ್ಮೀಕಿಯರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು. ಸನಾತನ ಧರ್ಮವು ಜಾತಿಗಿಂತ ಜ್ಞಾನಕ್ಕೆ ಹೆಚ್ಚಿನ ಬೆಲೆ ನೀಡಿದೆ ಎನ್ನುವುದಕ್ಕೆ ಈ ಮಹಾ ಋಷಿಗಳ ಅಗ್ರಸ್ಥಾನವೇ ಸಾಕ್ಷಿ. ಆಚಾರ್ಯತ್ರಯರೆಲ್ಲರೂ ಮಹಾಮುನಿ ವ್ಯಾಸ, ಮಹರ್ಷಿ ವಾಲ್ಮೀಕಿಯ ಧರ್ಮಗ್ರಂಥಗಳಿಂದ ಜ್ಞಾನವನ್ನು ಪಡೆದರು. ಈ ಪ್ರಕಾರವಾಗಿ ಜ್ಞಾನಕ್ಕೆ ಜಾತಿ ಬೇಧವಿಲ್ಲ ಎಂದು ನಿರೂಪಿಸಲ್ಪಟ್ಟಿದೆ. ರಾಮಾನುಜಾಚಾರ್ಯರು ಎಲ್ಲರಿಗೂ ಶ್ರೀ ವೈಷ್ಣವ ದೀಕ್ಷೆಯನ್ನು ನೀಡಿ ಸನಾತನ ಧರ್ಮದಲ್ಲಿ ಸಮಾನತೆಯನ್ನು ಎತ್ತಿಹಿಡಿದಿದ್ದಾರೆ. ಮಧ್ವಾಚಾರ್ಯರು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕೃಷ್ಣನ ಪ್ರತಿಬಿಂಬವನ್ನು ನೋಡಿದ್ದಾರೆ. ಶಂಕರಾಚಾರ್ಯರು ಶಿವನು ಚಾಂಡಾಲ ರೂಪದಲ್ಲಿ ಬಂದಾಗ ಪ್ರದಕ್ಷಿಣೆ ಹಾಕಿ ಮಹಿಷಾಷ್ಟಕವನ್ನು ರಚಿಸಿದ್ದಾರೆ. ಈ ಎಲ್ಲರೂ ಸನಾತನವನ್ನು ಒಪ್ಪಿಕೊಂಡಿದ್ದಾರೆ. ಸನಾತನ ಧರ್ಮವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಯತ್ನಸುವವರಿಂದ ಅಂತರವನ್ನು ಕಾಯ್ದುಕೊಳ್ಳುವ ಕೆಲಸವನ್ನು ಪ್ರಸ್ತುತ ಯುವಜನತೆ ಮಾಡಬೇಕಿದೆ. ಧರ್ಮದ ವಿಚಾರವಾಗಿ ಬಲಿಯಾದವರ ಪಟ್ಟಿಯನ್ನು ತೆಗೆದು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಶಕ್ತರಲ್ಲದವರ ಸಂಖ್ಯೆಯೇ ಹೆಚ್ಚಿದೆ. ಧರ್ಮದ ವಿಚಾರದಲ್ಲಿ ಗಲಾಟೆಯಾದಾಗ ಜನಸಾಮಾನ್ಯರ ಸೊತ್ತಿಗೆ ನಷ್ಟವುಂಟಾಗಿದೆಯೇ ಹೊರತು ಶ್ರೀಮಂತರ ಆಸ್ಥಿ ನಾಶವಾದ ಉದಾಹರಣೆ ಕಡಿಮೆ. ಯುವ ಜನತೆಗೆ ಧರ್ಮದ ಬಗ್ಗೆ ಇಲ್ಲಸಲ್ಲದ ಪ್ರಚೋದನೆಗಳನ್ನು ನೀಡಿ ಧರ್ಮದ ತಿರುಳನ್ನೇ ತಿಳಿಯದಂತೆ ಮಾಡುವಷ್ಟು ಪಾಪದ ಕೆಲಸ ಮತ್ತೊಂದಿಲ್ಲ. ಯಾವುದೇ ಧರ್ಮಗ್ರಂಥಗಳಲ್ಲಿ ಇತರರ ಪ್ರಾಣಹಾನಿ ಮಾಡಬೇಕೆಂದು ತಿಳಿಸಿಲ್ಲ. ರಾಮನ ಪಟ್ಟಾಭಿಷೇಕದ ಚಿತ್ರವೇ ಸನಾತನದಲ್ಲಿ ಜಾತಿವಾದ ಎನ್ನುವ ಸುಳ್ಳುಕಲ್ಪನೆಯನ್ನು ಸುಟ್ಟು ಹಾಕುತ್ತದೆ. ಸನಾತನ ಧರ್ಮದಲ್ಲಿ ಕೇಳಿ ಬರುವ ಮಡಿ ಮೈಲಿಗೆಯ ಮಾತುಗಳು ಮಧ್ಯದಲ್ಲಿ ಬಂದುದಾಗಿದೆ. ಇದು ಸನಾತನ ಧರ್ಮದ ದೋಷವಲ್ಲ. ಯಾವ ಧರ್ಮದಲ್ಲಿ ಯುವಕರು ತಪ್ಪು ದಾರಿ ಹಿಡಿಯುತ್ತದ್ದಾರೋ ಅವರನ್ನು ಮನೆ ಮತ್ತು ಧರ್ಮದಿಂದ ಬಹಿಷ್ಕರಿಸಿದಾಗ ನಿಜವಾದ ಬದಲಾವಣೆಯ ಹಾದಿ ತೆರೆದುಕೊಳ್ಳುತ್ತದೆ. ನನ್ನ ಧರ್ಮ ಶ್ರೇಷ್ಠ ಇತರರ ಧರ್ಮ ಕನಿಷ್ಠ ಎಂಬ ಸ್ವಚಿಂತನೆಯನ್ನು ಬಿಟ್ಟು ಮನುಷ್ಯತ್ವ ಎನ್ನುವ ಶ್ರೇಷ್ಠ ಚಿಂತನೆಯನ್ನು ಬೆಳೆಸಿಕೊಳ್ಳುವ ಅಗತ್ಯ ಪ್ರಸ್ತುತ ಪ್ರತಿಯೊಬ್ಬರಲ್ಲೂ ಇದೆ ಎನ್ನುವುದು ಅಕ್ಷರಶಃ ಸತ್ಯ.

Leave a Reply